ಬೆಂಗಳೂರು: ಮೊಬೈಲ್ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಯುವಕನನ್ನು ಬಿಹಾರ ಮೂಲದವನು ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಮೊಬೈಲ್ ಚಾರ್ಜ್ ಹಾಕಿ ಮಾತನಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಘಟನೆ ವಿವರ:
ಯುವಕ ಮೊಬೈಲ್ ಚಾರ್ಜ್ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದನು. ಈ ವೇಳೆ ಸ್ಫೋಟಗೊಂಡು ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಘಟನೆಯಲ್ಲಿ ಯುವಕ ತನ್ನ ಎಡಗೈನ ಮೂರು ಬೆರಳುಗಳನ್ನೂ ಕಳೆದುಕೊಂಡಿದ್ದಾನೆ.
ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಳ್ಳುತ್ತಿದ್ದಂತೆಯೇ ಕೂಡಲೇ ಆತನನ್ನು ಸ್ನೇಹಿತರು ನಗರದ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ. ಯುವಕನ ಹೆಸರು ಹಾಗೂ ಯಾವ ಕಂಪನಿ ಮೊಬೈಲ್ ಎಂದು ತಿಳಿದುಬಂದಿಲ್ಲ.
ಈ ಸಂಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.