ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯ (Hospital) ನರ್ಸ್ (Nurse) ಮೇಲೆ ಪಾಗಲ್ ಪ್ರೇಮಿಯೊಬ್ಬ ಆಸ್ಪತ್ರೆಯ ಕೌಂಟರ್ ಬಳಿಯೇ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಅ.30ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಗರದ ಪ್ರಕಾಶ್ ಜಾಧವ್ ಎಂಬಾತ ನರ್ಸ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಪ್ರಾಣ ಪಣಕ್ಕಿಟ್ಟು ಆಕೆ ಹೋರಾಡಿದ್ದಳು. ಆರೋಪಿಯ ಕೃತ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ್ದ ಖಡೇಬಜಾರ್ ಪೊಲೀಸರು(Police), ಪ್ರಕಾಶ್‍ನನ್ನು ಬಂಧಿಸಿದ್ದರು.
ಆರೋಪಿ ಹೆಲ್ಮೆಟ್ ಧರಿಸಿಕೊಂಡು ಆಸ್ಪತ್ರೆಗೆ ಬಂದಿದ್ದ. ಬಳಿಕ ಪ್ಲಾಸ್ಟಿಕ್ ಕವರ್‍ನಲ್ಲಿ ತಂದಿದ್ದ ಮಚ್ಚಿನಿಂದ ನರ್ಸ್ ಮೇಲೆ ದಾಳಿ ನಡೆಸಿದ್ದ. ಈ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಹೆದರಿ ಅಲ್ಲಿಂದ ಓಡಿದ್ದರು.
ಆರೋಪಿ ಪ್ರಕಾಶ್ ಹಲ್ಲೆಗೊಳಗಾದ ನರ್ಸ್‍ನ 10ನೇ ತರಗತಿಯ ಸಹಪಾಠಿಯಾಗಿದ್ದ. ಕೆಲ ದಿನಗಳ ಹಿಂದೆ ಕುಟುಂಬಸ್ಥರನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ಮದುವೆ ಪ್ರಸ್ತಾಪ ಮಾಡಿದ್ದ. ಅಲ್ಲದೇ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ಯುವತಿ ಒಪ್ಪಿರಲಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿದೆ.