ಯಾದಗಿರಿ: ಚಾಲಾಕಿ ಕಳ್ಳನೊಬ್ಬ ದೇವರಿಗೆ ನಮಸ್ಕಾರ ಮಾಡಿ ಅದೇ ದೇವರ ಹುಂಡಿಯಿಂದ ಹಣ ಕಳ್ಳತನ ಮಾಡಿದ್ದಾನೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನ ಮಾಳಿಂಗರಾಯ ಈ ಖತರ್ನಾಕ್ ಕಳ್ಳ. ಸರಿಯಾಗಿ ಇನ್ನೂ ಮೀಸೆ ಮೂಡದ 19 ವರ್ಷದ ಈ ಮಾಳಿಂಗರಾಯ, ಕಳೆದ ಡಿಸೆಂಬರ್ 31ರ ರಾತ್ರಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದಲ್ಲಿರುವ ಮತ್ತು ಉತ್ತರ ಕರ್ನಾಟಕ ಪ್ರಸಿದ್ಧ ಕೋಡೆಕಲ್ ಬಸವಣ್ಣ ದೇವಸ್ಥಾನಕ್ಕೆ ಕನ್ನ ಹಾಕಿದ್ದಾನೆ.
ಮೊದಲು ದೇವಸ್ಥಾನದ ಒಳಗೆ ಬಂದ ಕಳ್ಳ, ಅತ್ತ-ಇತ್ತ ನೋಡಿ ಹುಂಡಿ ಕಡೆ ಹೆಜ್ಜೆ ಹಾಕಿ ಕಳ್ಳ ಬೆಕ್ಕಿನಂತೆ ಹುಂಡಿಯನ್ನು ನೋಡುತ್ತಾನೆ. ಬಳಿಕ ದೇವರ ಮೂರ್ತಿಗೆ ನಮಸ್ಕಾರ ಮಾಡಿ, ದೇವಸ್ಥಾನಕ್ಕೆ ಒಂದು ರೌಂಡ್ ಹಾಕಿ ನಂತರ ಹುಂಡಿ ಕಡೆ ತೆರಳಿ ಬೀಗ ಮುರಿದು ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಕಳ್ಳನ ಈ ಖತರ್ನಾಕ್ ಪ್ಲಾನ್ ದೇವಸ್ಥಾನದಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೋಡೆಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಹ ದಾಖಲಾಗಿದೆ. ಘಟನೆ ನಡೆದ ನಾಲ್ಕು ದಿನಗಳಲ್ಲಿ ಪ್ರಕರಣ ಭೇದಿಸಿದ ಕೋಡೆಕಲ್ ಠಾಣೆಯ ಪೊಲೀಸರು, ಚಾಲಾಕಿ ಕಳ್ಳನನ್ನು ಬಂಧಿಸಿದ್ದಾರೆ.