ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಮಾತ್ರ ನಟಿಯ ಬೆಂಬಲಕ್ಕೆ (Support) ನಿಂತಿದ್ದಾರೆ. ಪೂನಂ ಮಾಡಿದ ಕೆಲಸ ಉತ್ತಮವಾದದ್ದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನೀವು ಮಾಡಿದ ಕೆಲಸಕ್ಕೆ ಟೀಕೆಗಳು ಬರಬಹುದು. ಆದರೆ, ನೀವು ಮಾಡಿದ ಕೆಲಸ ಮೆಚ್ಚುವಂಥದ್ದು. ನಿಮ್ಮಿಂದಾಗಿ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ವ್ಯಾಪಕವಾಗಿ ಪ್ರಚಾರ ಸಿಕ್ಕಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರ. ನಿಮಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವರ್ಮಾ ಬರೆದುಕೊಂಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆಯನ್ನು (Poonam Pandey) ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಪೂನಂ ಪಾಂಡೆ’ (Boycott) ಟ್ರೆಂಡ್ ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಪೂನಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
ತಮ್ಮ ಪ್ರಚಾರಕ್ಕಾಗಿ ಇಂತಹ ಸ್ಟಂಟ್‌ಗಳನ್ನ ಮಾಡುವಂತವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸಾವಿನ ಸುದ್ದಿಯಿಂದ ಗರ್ಭಕಂಠ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಇದು ಕ್ಯಾನ್ಸರ್ ಸಮಸ್ಯೆಯಿಂದ ಬುದುಕುಳಿದಿರುವವರನ್ನು ಗೇಲಿ ಮಾಡಿದಂತಾಗಿದೆ. ಇದರಿಂದ ಪೂನಂ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.