ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸರ್ಕಾರಕ್ಕೆ 6 ದಿನಗಳ ಒಳಗಾಗಿ ಚುನಾವಣೆ ಘೋಷಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯೆ ನೀಡಿದ್ದಾರೆ.
ಇಮ್ರಾನ್ ಖಾನ್‌ಗೆ ತಿರುಗೇಟು ನೀಡಿದ ಷರೀಫ್, ಮುಂದಿನ ಸಾರ್ವತ್ರಿಕ ಚುನಾವಣೆಗಳ ದಿನಾಂಕವನ್ನು ರಾಷ್ಟ್ರೀಯ ಅಸೆಂಬ್ಲಿ ನಿರ್ಧರಿಸುತ್ತದೆ. ನಿಮ್ಮ ಆದೇಶ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.
ಬುಧವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರವನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ ಷರೀಫ್, ನಾನು ಪಿಟಿಐ ನಾಯಕನಿಗೆ ಒಂದು ವಿಚಾರ ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮ್ಮ ಆದೇಶ ಕೆಲಸ ಮಾಡುವುದಿಲ್ಲ. ಚುನಾವಣೆ ಯಾವಾಗ ನಡೆಸಬೇಕು ಎಂಬುದನ್ನು ರಾಷ್ಟರೀಯ ಅಸೆಂಬ್ಲಿ ನಿರ್ಧರಿಸುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: 6 ದಿನಗಳೊಳಗೆ ಚುನಾವಣೆ ಘೋಷಿಸಿ, ಇಲ್ಲವೇ…: ಇಮ್ರಾನ್ ಖಾನ್ ಎಚ್ಚರಿಕೆ
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಗುರುವಾರ ಇಸ್ಲಾಮಾಬಾದ್‌ನ ಡಿ-ಚೌಕ್ ಪ್ರದೇಶದಲ್ಲಿ ತೀವ್ರವಾದ ಪ್ರತಿಭಟನೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, 6 ದಿನಗಳ ಒಳಗಾಗಿ ಹೊಸ ಚುನಾವಣೆ ಘೋಷಿಸಬೇಕಾಗಿ ಖಾನ್ ಗಡುವು ನೀಡಿದ್ದಾರೆ. ಒಂದು ವೇಳೆ ಹೊಸ ಚುನಾವಣೆ ಘೋಷಿಸದೇ ಹೋದಲ್ಲಿ ಪ್ರತಿಭಟನೆ ನಡೆಸಲು ಇಡೀ ರಾಷ್ಟ್ರದೊಂದಿಗೆ ಇಸ್ಲಾಮಾಬಾದ್‌ಗೆ ಮರಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ