ಹಾಸನ: ಪ್ರೀತಿಸುವಂತೆ ಯುವತಿಯೊಬ್ಬಳಿಗೆ ನಿರಂತರ ಕಿರುಕುಳ ನೀಡಿ ಜನರ ಎದುರೇ ಯುವಕನೊಬ್ಬ ಅವಮಾನ ಮಾಡಿದ ಪರಿಣಾಮ ಮನನೊಂದು ಯುವತಿ ನೇಣಿಗೆ ಶರಣಾದ ಘಟನೆ ಬೇಲೂರಿನ (Beluru) ನಿಡಗೂಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯಣ್ಣ ಎಂಬವರ ಪುತ್ರಿ ಸಂಗೀತಾ (21) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅದೇ ಗ್ರಾಮದ ಹೊನ್ನಯ್ಯ ಎಂಬವರ ಪುತ್ರ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೇ ತನಗೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರಲ್ಲಿ ಕೇಳಿದ್ದ. ಇದಕ್ಕೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇಷ್ಟಾದರೂ ಶಿವು, ಸಂಗೀತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾದ ಪತಿ – ಕ್ಷಣಮಾತ್ರದಲ್ಲೇ ಸ್ಕೆಚ್ ಹಾಕಿ ಪ್ರಿಯಕರನಿಂದ್ಲೇ ಕೊಲೆ ಮಾಡಿಸಿದ್ಲು ಪತ್ನಿ
ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೆವಸ್ಥಾನಕ್ಕೆ ಸಂಗೀತಾ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ಶಿವು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿ, ಫೋನ್ ಮಾಡಿದಾಗ ರಿಸೀವ್ ಮಾಡಬೇಕೆಂದು ವಾನಿರ್ಂಗ್ ಮಾಡಿದ್ದಾನೆ. ನನ್ನನ್ನು ಮದುವೆಯಾಗಲಿಲ್ಲ ಎಂದರೆ ನೀನು ಸತ್ತುಹೋಗು ಎಂದು ಜನರ ಎದುರೇ ಅವಮಾನ ಮಾಡಿ ಹೋಗಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಇದೇ ನೋವಿನಿಂದ ಗ್ರಾಮಕ್ಕೆ ಬಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳು ಸಾಯುವಂತೆ ಪ್ರಚೋದನೆ ನೀಡಿ, ಸಾರ್ವಜನಿಕರ ಎದುರು ಅವಮಾನ ಮಾಡಿದ ಶಿವು ವಿರುದ್ಧ ಕಾನೂನು ಕ್ರಮಕ್ಕೆ ಮೃತಳ ಪೋಷಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಬೇಲೂರು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಿವುನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಗನ ಮುಖದಿಂದ ಪತಿಯ ನೆನಪಾಗ್ತಿದ್ದಕ್ಕೆ ಹತ್ಯೆ!