ಮಂಗಳೂರು: ಶಾಲೆಯ (School) ಮುಂದೆ ಬಿಯರ್ ಬಾಟಲಿಯನ್ನು (Beer Bottle) ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಉಳ್ಳಾಲದ (Ullala) ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ನಡೆದಿದೆ.
ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿಯ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ. ಬುಧವಾರ ತಡರಾತ್ರಿ ದುಷ್ಕರ್ಮಿಗಳಾದ ಸೂರಜ್ ಮತ್ತು ರವಿರಾಜ್ ಶಾಲೆ ಎದುರು ಇದ್ದ ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿದಿದ್ದಾರೆ. ನಂತರ ಬಾಟಲಿಯನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಕಂಡ ವರುಣ್ ಹಾಗೂ ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ಸೂರಜ್ ಹಾಗೂ ರವಿರಾಜ್ ವರುಣ್ ಹಾಗೂ ಅಕ್ಷಯ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ಆರೋಪಿಗಳು ಹರಿತವಾದ ಆಯುಧದಿಂದ ವರುಣ್ ಬೆನ್ನಿಗೆ ಇರಿದಿದ್ದಾರೆ. ಇದನ್ನೂ ಓದಿ: ಬಿಎಂಟಿಸಿಗೆ ಗೃಹಿಣಿ ಬಲಿ – ಬಸ್ ಚಾಲಕ, ನಿರ್ವಾಹಕ ಎಸ್ಕೇಪ್
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಅದೇ ಸ್ಥಿತಿಯಲ್ಲಿ ತನ್ನ ಮನೆ ಕಡೆ ನಡೆದುಕೊಂಡೇ ಹೋಗಿದ್ದಾನೆ. ಆತ ನಡೆದ ದಾರಿಯುದ್ದಕ್ಕೂ ರಕ್ತ ಹರಿದಿದೆ. ತಕ್ಷಣ ವರುಣ್ ಕುಟುಂಬಸ್ಥರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅದೇ ಸಾರಸ್ವತ ಕಾಲೋನಿ ನಿವಾಸಿಗಳಾಗಿರುವ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ವಾಹನ ಚಾಲಕನಾಗಿದ್ದ. ಇದೀಗ ವರುಣ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ