ಚಿಕ್ಕಮಗಳೂರು: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗಣಪತಿ ಪೆಂಡಾಲ್ ಬಳಿ ನಡೆದಿದೆ.
ತರೀಕೆರೆ ತಾಲೂಕಿನ ಕನಮಹಟ್ಟಿ ಗ್ರಾಮದ ಅರುಣ್ ಕುಮಾರ್(23) ಕೊಲೆಯಾದ ಯುವಕ. ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ 3-4 ಜನರ ತಂಡ ಬೈಕಿನಲ್ಲಿ ಬರುತ್ತಿದ್ದ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯಕ್ಕೆ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ತನಿಖೆ ಮಾಡಲು ತರೀಕೆರೆ ಹಾಗೂ ಬೀರೂರು ಠಾಣಾ ವ್ಯಾಪ್ತಿ ಎರಡು ತಂಡಗಳ ರಚನೆ ಮಾಡಲಾಗಿದೆ. ಹಲವರ ಮೇಲೆ ಅನುಮಾನ ಕೂಡ ಬಂದಿದೆ. ವೈಯಕ್ತಿಕ ದ್ವೇಷ ಹಾಗೂ ಕೆಲ ದಿನಗಳ ಹಿಂದೆ ನಡೆದ ಜಾತ್ರೆ ವೇಳೆ ನಡೆದ ಸಣ್ಣ ಗಲಾಟೆಯಿಂದ ಕೊಲೆಯಾಗಿರಬಹುದೆಂಬ ಅನುಮಾನವಿದೆ. ಎಲ್ಲಾ ವಿಧದಲ್ಲೂ ತನಿಖೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದು. ಕೊಲೆ ಮಾಡಿರುವವರು ಕೂಡ 23 ರಿಂದ 26-27 ವಯಸ್ಸಿನವರೆ ಆಗಿದ್ದಾರೆ ಎಂದು ಎಸ್‍ಪಿ ಹರೀಶ್ ಪಾಂಡೆ ಹೇಳಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv