ಬೆಂಗಳೂರು: ಸೋದರಿ ಮನೆಗೆ ಬಂದಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹನುಮಂತ ನಗರದ ಕಾಳಿದಾಸ ಸರ್ಕಲ್ ಬಳಿ ನಡೆದಿದೆ.
ಭರತ್ (20) ಹತ್ಯೆಯಾದ ಯುವಕ. ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಈ ಘಟನೆ ನಡೆದಿದ್ದು, ಮೃತ ಭರತ್ ಕಾಳಿದಾಸ ಲೇಔಟ್ ನಿವಾಸಿಯಾಗಿದ್ದನು ಎಂದು ತಿಳಿದು ಬಂದಿದೆ.
ಮೃತ ಭರತ್ ಮೇಲೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಕೇಸ್ ಇತ್ತು. 5 ದಿನಗಳ ಹಿಂದೆಯಷ್ಟೆ ಭರತ್ ಜೈಲಿನಿಂದ ಹೊರ ಬಂದಿದ್ದನು ಎಂದು ತಿಳಿದು ಬಂದಿದೆ. ಶುಕ್ರವಾರ ಹನುಮಂತ ನಗರದಲ್ಲಿರುವ ಸೋದರಿ ಮನೆಗೆ ಹೋಗಿದ್ದನು. ಆದರೆ ಇದೇ ವೇಳೆ ಐದಾರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಬಂದು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಹನುಮಂತ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.