– ಯುವತಿ ತಂದೆಯ ಕಣ್ಣಿಗೆ ಗಾಯ, ಕಾಲು ಮುರಿತ
ರಾಯಚೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ಬೆನ್ನಲ್ಲೇ ರಾಯಚೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ನಿತ್ಯ ಪೀಡಿಸುತ್ತಿದ್ದ ಯುವಕನಿಂದ ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ರಾಯಚೂರಿನ (Raichur) ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್ 3 ರಲ್ಲಿ ಘಟನೆ ನಡೆದಿದೆ. ಯುವಕನ ಕಾಟ ತಪ್ಪಿಸಲು ಮಗಳನ್ನ ಊರು ಬಿಡಿಸಿ ಸಂಬಂಧಿಕರ ಮನೆಯಲ್ಲಿರಿಸಿದ್ದಕ್ಕೆ, ಆರೋಪಿ ಪ್ರಣವ್ ಹಾಗೂ ಆತನ ಕಡೆಯವರು ಯುವತಿ ತಂದೆ ಹೀರಾ ಮಹಾನ್, ತಾಯಿ ಶೃತಿ ಮಂಡಲ್, ಸಹೋದರ ಹೀಮಂತು ಸಂಬಂಧಿ ಶುಬ್ರತೋ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಪ್ರಕರಣ ದಿಕ್ಕು ತಪ್ಪಿಸುತ್ತಿದ್ದಾರೆ, ಸಿಎಂಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ತೇವೆ: ನೇಹಾ ತಂದೆ ಭಾವುಕ
ಯುವತಿ ಸಂಪರ್ಕಕ್ಕೆ ಸಿಗದೇ ಇದ್ದಾಗ ರೊಚ್ಚಿಗೆದ್ದು, ಆಕೆಯನ್ನ ಯಾಕೆ ಬೇರೆಡೆ ಕಳುಹಿಸಿದ್ರಿ ಆಕೆಯನ್ನ ಮತ್ತೆ ಕರೆತನ್ನಿ ಅಂತ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಯುವತಿ ತಂದೆ ಕಾಲು ಮುರಿದಿದ್ದು, ಕಣ್ಣಿಗೆ ಗಂಭೀರ ಗಾಯವಾಗಿದೆ. ಯುವತಿ ತಾಯಿ ಸೀರೆ ಎಳೆದಾಡಿ ಅಮಾನವೀಯವಾಗಿ ವರ್ತನೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಆರೋಪಿ ಪ್ರಣವ್ ಪ್ರೀತಿ-ಪ್ರೇಮ ಅಂತ ಟಾರ್ಚರ್ ಕೊಡ್ತಿದ್ದ ಎನ್ನಲಾಗಿದೆ.
ಆರೋಪಿಗಳಾದ ಪ್ರಣವ್ ಬಿಸ್ವಾಸ್, ಪಿಯೂಸ್ ಬಿಸ್ವಾಸ್, ಮಧು ಬಿಸ್ವಾಸ್ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ತಂದೆ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.