– ಹಣ, ಮೊಬೈಲ್ ಇಲ್ಲದೇ 1400 ಕಿ.ಮೀ ಪಯಣ
ರಾಮನಗರ: ದೇಶವು ಸಾಕಷ್ಟು ವಿಭಿನ್ನ ಸಂಸ್ಕೃತಿಯನ್ನ ಒಳಗೊಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಸಂಸ್ಕೃತಿ, ಕಲೆ, ಭಾಷೆಗಳು ವಿಭಿನ್ನವಾಗಿದೆ. ಇದನ್ನು ತಿಳಿಯಲು ಯುವಕ, ಯುವತಿ ಪಾಂಡೀಚೆರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದ್ದು, ಮೊಬೈಲ್ ಇಲ್ಲದೇ, ಹಣವೂ ಇಲ್ಲದೆ 70 ದಿನಗಳು 1400 ಕಿ.ಮೀ ಪಯಣ ನಡೆಸುತ್ತಿದ್ದಾರೆ.
ಉತ್ತರಾಖಂಡ್ ರಾಜ್ಯದ ಸಮಾಜ ಸೇವಕ ಅಂಕಿತ್ ದಾಸ್ ಹಾಗೂ ಮಹಾರಾಷ್ಟ್ರದ ಲೇಖಕಿ ನೈನಿಕ ಭಟ್ಯ ಕಾಲ್ನಡಿಗೆಯಲ್ಲಿ ಪಯಣ ನಡೆಸುತ್ತಿದ್ದಾರೆ. ಈಗಾಗಲೇ ನೈನಿಕ ಭಟ್ಯ ಹಾಗೂ ಅಂಕಿತ್ ದಾಸ್ 550 ಕಿ.ಮೀ ಪಯಣ ಮುಗಿಸಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಹಾದು ಬಂದು ಕರ್ನಾಟಕ ತಲುಪಿದ್ದಾರೆ. ತಮಿಳುನಾಡು ಮತ್ತು ಆಂಧ್ರದಲ್ಲಿ ಇವರಿಗೆ ಉತ್ತಮ ಸ್ಪಂದನೆ ಜನಗಳಿಂದ ಸಿಕ್ಕಿದ್ದು, ಈಗ ಕರ್ನಾಟಕದಿಂದ ಪಯಣ ಆರಂಭ ಮಾಡಿರುವ ಜೋಡಿ ಬೆಂಗಳೂರಿನಿಂದ ಮಾಗಡಿಗೆ ಆಗಮಿಸಿ ಕುಣಿಗಲ್ ಮಾರ್ಗದ ಮೂಲಕ ಪಯಣ ಬೆಳೆಸಿದ್ದಾರೆ.
Advertisement
Advertisement
1400 ಕಿಲೋ ಮೀಟರ್ ಪಯಣ ನಡೆಸುತ್ತಿರುವ ಅಂಕಿತ್ ದಾಸ್ ಹಾಗೂ ನೈನಿಕ ಭಟ್ಯ ಬಳಿ ನಯಾಪೈಸೆ ಹಣವಿಲ್ಲ. ಮೊಬೈಲ್ ಸಹ ಇಲ್ಲ. ಯಾವುದೇ ಮ್ಯಾಪ್ ಇಲ್ಲದೆ, 2 ಬ್ಯಾಗ್, ನೀರಿನ ಬಾಟಲಿ, ಹಾಕಿಕೊಳ್ಳಲು ಕೆಲವು ಬಟ್ಟೆಗಳು, 2 ತಟ್ಟೆಯನ್ನು ಹಿಡಿದು ಪಯಣ ಬೆಳೆಸಿದ್ದಾರೆ. ಪಯಣದ ದಾರಿಯಲ್ಲಿ ಯಾರು ಇವರಿಗೆ ಊಟ ಹಾಕುತ್ತಾರೋ ಅಲ್ಲೆ ಇವರಿಗೆ ಊಟ, ಕತ್ತಲಾದ ಮೇಲೆ ಯಾರು ಇವರಿಗೆ ಮಲಗಲು ಜಾಗ ಕೊಡುತ್ತಾರೋ ಅಲ್ಲೆ ಇವರ ನಿದ್ರೆ. ಯಾರೂ ಇವರಿಗೆ ಆಶ್ರಯ ಕೊಡದಿದ್ದರೆ ದೇವಸ್ಥಾನ, ಶಾಲೆಗಳಲ್ಲಿ ಮಲಗಿ ಬೆಳಗ್ಗೆ ಎದ್ದು ತಮ್ಮ ಪಯಣ ಆರಂಭಿಸುತ್ತಾರೆ.
Advertisement
ನಾವು ಪಯಣಿಸಿರುವ ಎಲ್ಲಾ ಕಡೆಯು ಸಾರ್ವಜನಿಕರು ಅತಿಥಿಗಳನ್ನು ಸ್ವಾಗತಿಸುವಂತೆ ಸ್ವಾಗತಿಸಿದ್ದು, ಪ್ರತಿ ದಿನವು 3 ಹೊತ್ತು ಊಟ ಸಿಕ್ಕಿದೆ. ಒಂದೊಂದು ದಿನ ಹೆಚ್ಚಿಗೆ ಊಟ ಸಿಕ್ಕಿ ಅದನ್ನು ನಾವು ಎತ್ತುಕೊಂಡು ಹೋದ ಪ್ರಸಂಗವು ಇದೆ ಎಂದು ಅಂಕಿತ್ ದಾಸ್ ತಿಳಿಸುತ್ತಾರೆ.
Advertisement
ಕರ್ನಾಟಕದ ಕನ್ನಡಿಗರು ವಿಶಾಲ ಹೃದಯದವರು ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಕರ್ನಾಟಕದಲ್ಲಿ ಪಯಣ ಆರಂಭಿಸಿರುವ ಅಂಕಿತ್, ನೈನಿಕ ಕರ್ನಾಟಕ ಜನತೆಯ ಪ್ರೀತಿ, ಇಲ್ಲಿನ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೇಪರ್, ಟಿವಿಗಳಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ ಎಂಬ ಸುದ್ದಿಗಳನ್ನು ಕೇಳುತ್ತಿದ್ದೆವು. ಆದರೆ ನಮಗೆ ಎಲ್ಲೂ ಕೂಡ ಅಪಾಯ ಬಂದಿಲ್ಲ. ಇಲ್ಲಿನ ಜನತೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಜನಗಳು ಈ ಪ್ರದೇಶ ಅಪಾಯಕಾರಿ ಎಂದು ಹೇಳಿದರೆ ನಾವು ಅಲ್ಲಿಗೆ ಹೋಗುವುದಿಲ್ಲ. ಎಲ್ಲಾ ಕಡೆಯೂ ನಮ್ಮನ್ನು ಪ್ರೀತಿಯಿಂದಲೇ ಕಾಣುತ್ತಿದ್ದಾರೆಂದು ನೈನಿಕ ಹೇಳಿದ್ದಾರೆ.
ಅಂಕಿತ್ ಅವರು ತಮ್ಮ ಗೆಳತಿ ಪ್ರಿಯಾನ್ಷಾರವರಿಗೆ ತಾವು ಹೋಗುವ ಸ್ಥಳದಿಂದ ಬೇರೆಯವರ ಮೊಬೈಲ್ನಿಂದ ವಾಟ್ಸಾಪ್ ಮೂಲಕ ಎಲ್ಲಿ ಇದ್ದೇವೆಂದು ತಿಳಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಬೇರೆಯವರ ಮೊಬೈಲ್ನಲ್ಲಿ ರೂಟ್ ಮ್ಯಾಪ್‍ನ್ನು ನೋಡಿ ಪಯಣ ಬೆಳೆಸುತ್ತಿರುವುದು ವಿಶೇಷವಾಗಿದೆ.
ಇದರ ಜೊತೆಗೆ ತಾವು ಹೋಗುವ ಸ್ಥಳಗಳ ಸಂಸ್ಕೃತಿ, ವಿಶೇಷತೆಗಳ ಚಿತ್ರಗಳನ್ನು ಸೆರೆಹಿಡಿದು ಡೈರಿಯಲ್ಲಿ ಮಾಹಿತಿ ದಾಖಲಿಸಿಕೊಳ್ತಿದ್ದಾರೆ. ಇವರ ಜೊತೆ ಇರುವ ಸಾರ್ವಜನಿಕರ ಫೋಟೋಗಳನ್ನು ಬೇರೆಯವರ ಮೊಬೈಲ್ನಿಂದ ವಾಟ್ಸಾಪ್ ಮಾಡಿಸಿಕೊಂಡು ಪಯಣ ಮುಂದುವರೆಸಿದ್ದಾರೆ. ಇಂಗ್ಲೀಷ್, ಹಿಂದಿ ಬಿಟ್ಟರೆ ಇವರಿಗೆ ಬೇರೆ ಭಾಷೆ ಗೊತ್ತಿಲ್ಲ. ಕರ್ನಾಟಕಕ್ಕೆ ಬಂದಿರುವ ನೈನಿಕ ಭಟ್ಯ ಸ್ವಲ್ಪ ಸ್ವಲ್ಪ ಕನ್ನಡವನ್ನು ಕಲಿತು ಜನಗಳ ಜೊತೆ ಸಂಪರ್ಕ ಮಾಡಿ ತಮ್ಮ ಉದ್ದೇಶವನ್ನು ತಿಳಿಸಿ, ಊಟ ಮತ್ತು ಮಲಗಲು ಆಶ್ರಯ ಪಡೆಯುತ್ತಿದ್ದಾರೆ. ಆದರೆ ಕೆಲವೇ ದಿನಗಳಿಂದ ಕರ್ನಾಟಕದ ಸಂಪರ್ಕವನ್ನು ಹೊಂದಿರುವ ನೈನಿಕ ಭಟ್ಯ ಕನ್ನಡ ಕಲಿತಿರುವುದು ಹೆಮ್ಮೆಯ ವಿಚಾರವಾಗಿದೆ.