ಚಿತ್ರಹಿಂಸೆಯ ದಿನಗಳ ಬಗ್ಗೆ ಪೃಥ್ವಿ ಶಾ ಮಾತು

Public TV
3 Min Read
Prithvi Shaw Main

ಮುಂಬೈ: ಕ್ರಿಕೆಟ್‍ನಿಂದ ದೂರವಿರುವ ಸಮಯ ಚಿತ್ರಹಿಂಸೆ ಎಂದು ಟೀಂ ಇಂಡಿಯಾ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ, ಡೋಪಿಂಗ್ ನಿಷೇಧಕ್ಕೆ ಒಳಗಾದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಕೊರೊನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟಿನಿಂದಾಗಿ ಎಲ್ಲಾ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಕ್ರಿಕೆಟ್ ಟೂರ್ನಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಪ್ರತಿಭಾನ್ವಿತ 20 ವರ್ಷದ ಇಂಡಿಯಾ ಓಪನರ್ ಪೃಥ್ವಿ ಶಾ ಅವರು ಗಾಯ ಮತ್ತು ಡೋಪಿಂಗ್ ನಿಷೇಧದಿಂದಾಗಿ 2019ರಲ್ಲಿ ಹೆಚ್ಚಿನ ಸಮಯ ತಂಡದಿಂದ ಹೊರಗುಳಿದಿದ್ದರು. ಆದರೆ ತಂಡಕ್ಕೆ ಕಮ್‍ಬ್ಯಾಕ್ ಮಾಡಿರುವ ಅವರ ಮೇಲೆ ಕೊರೊನಾ ಬಿಕ್ಕಟ್ಟು ಪರಿಣಾಮ ಬೀರಿದೆ.

prithvi shaw

ಮಾಧ್ಯಮ ಸಂರ್ದಶನವೊಂದರಲ್ಲಿ ಮಾತನಾಡಿರುವ ಪೃಥ್ವಿ ಶಾ, ಡೋಪಿಂಗ್‍ನಿಂದಾಗಿ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಸಮಯ ನನ್ನ ಜೀವನದ ಅತ್ಯಂತ ಕಷ್ಟದ ಅವಧಿಯಾಗಿತ್ತು. ಅದೊಂದು ಚಿತ್ರಹಿಂಸೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಭಾರವಾದ ಮನಸ್ಸಿನಿಂದ ಕಷ್ಟದ ಸಮಯವನ್ನ ನೆನೆದಿದ್ದಾರೆ.

ನಾವು ಸೇವಿಸುವ ಮಾತ್ರೆ, ಔಷಧಿ, ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಪ್ಯಾರಾಸಿಟಮಾಲ್ ನಂತಹ ಔಷಧವೂ ಇದಕ್ಕೆ ಹೊರತಾಗಿಲ್ಲ. ಈ ವಿಷಯಗಳ ಬಗ್ಗೆ ತಿಳಿಯದ ಯುವ ಕ್ರಿಕೆಟಿಗರಿಗೆ ನಾನು ಎದುರಿಸಿದ ಡೋಪಿಂಗ್ ಪ್ರಕರಣದ ಅರ್ಥವಾಗುವಂತೆ ಮಾಡಿದೆ. ಆಟಗಾರರು ಯಾವುದೇ ಔಷಧಿ ತೆಗೆದುಕೊಂಡರೂ ಸಹ ಅದನ್ನು ಸಂಬಂಧಪಟ್ಟ ವೈದ್ಯರು ಅಥವಾ ಬಿಸಿಸಿಐ ವೈದ್ಯರೊಂದಿಗೆ ತಿಳಿಸಬೇಕು. ನಿಷೇಧಿತ ವಸ್ತುಗಳ ಬಗ್ಗೆ ವೈದ್ಯರನ್ನು ಕೇಳುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ತೊಂದರೆಗೆ ಸಿಲುಕುವುದನ್ನ ತಪ್ಪಿಸಿಕೊಳ್ಳಬಹುದು. ನನ್ನ ಪ್ರಕರಣದಲ್ಲಿ ನಾನು ಕೆಮ್ಮು ಸಿರಪ್ ಅನ್ನು ಹೊಂದಿದ್ದೇ ತಪ್ಪಾಗಿತ್ತು. ಆ ಔಷಧಿ ನಿಷೇಧಿತ ವಸ್ತು ಎನ್ನುವುದು ನನಗೆ ತಿಳಿದಿರಲಿಲ್ಲ. ಅದರಿಂದ ಪಾಠ ಕಲಿತಿದ್ದೇನೆ ಮತ್ತು ಅದನ್ನು ಪುನರಾವರ್ತಿಸುವುದಿಲ್ಲ. ಈಗ ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೂ ಮೊದಲು ಬಿಸಿಸಿಐ ವೈದ್ಯರಿಗೆ ತಿಳಿಸಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

prithvi shaw

ನಾನು ಭಾರತ ತಂಡಕ್ಕೆ ಕಮ್‍ಬ್ಯಾಕ್ ಮಾಡಿದಾಗ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದು ಭಾವಿಸುತ್ತೇನೆ. ಕೋವಿಡ್ -19 ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರದ ಲಾಕ್‍ಡೌನ್ ನಿರ್ಧಾರವನ್ನು ಬೆಂಬಲಿಸಬೇಕು. ನಾವು ಸುರಕ್ಷಿತವಾಗಿರಲು ಮನೆಯಲ್ಲಿಯೇ ಇರಬೇಕು ಎಂದು ಸಲಹೆ ನೀಡಿದರು.

ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿರುವಿರಿ ಎಂಬ ಪ್ರಶ್ನೆಯೆ ಉತ್ತರಿಸಿರುವ ಶಾ, ಮನೆಯೊಳಗೆ ಜಿಮ್, ದಿನಚರಿಯನ್ನು ಅನುಸರಿಸುವ ಮೂಲಕ ನಾನು ಸದೃಢವಾಗಿರುತ್ತೇನೆ. ಸರಿಯಾದ ಆಹಾರ ಯೋಜನೆಯನ್ನು ಪಾಲಿಸುತ್ತೇನೆ. ಕ್ರಿಕೆಟ್‍ಗೆ ಸಂಬಂಧಿಸಿದಂತೆ ನನ್ನ ಹಿಂದಿನ ಆಟಗಳನ್ನು ವಿಶ್ಲೇಷಿಸಲು, ಸುಧಾರಿಸಿಕೊಳ್ಳಲು ಬೇಕಾಗುವ ಪ್ಲಾನ್‍ಗಳನ್ನು ಕಂಡುಕೊಳ್ಳುತ್ತಿರುವೆ. ಕ್ರೀಡಾ ದಂತಕಥೆಗಳ ಆತ್ಮಚರಿತ್ರೆಗಳನ್ನು ನಾನು ಓದುತ್ತಿದ್ದೇನೆ ಎಂದು ಹೇಳಿದರು.

Prithvi Shaw Sachin Tendulkar A

ಅಂಡರ್-19 ವಿಶ್ವಕಪ್ ಗೆದ್ದ ನಂತರ ನನ್ನ ಅಂತರರಾಷ್ಟ್ರೀಯ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದು ನಿಜವಾಗಿಯೂ ಮರೆಯಲಾಗದ ಕ್ಷಣ. ಆದರೆ ಅಂತಹ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ದೂರ ಹೋಗಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಡೋಪಿಂಗ್ ನಿಷೇಧದಂತಹ ಕೆಲವು ವಿಷಯಗಳು ನನ್ನ ಪರವಾಗಿದ್ದವು. ಆದರೆ ದುರದೃಷ್ಟಕರ ಪಾದದ ಗಾಯದಿಂದಾಗಿ ಭಾರತ ತಂಡದಿಂದ ದೂರ ಉಳಿದೆ. ನಾನು ಸಾರ್ವಕಾಲಿಕ ಶೇ.100 ಜನರನ್ನು ಸಂತೋಷಪಡಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದೇನೆ ಎಂದು ಶಾ ತಿಳಿಸಿದರು.

Prithvi Shaw 1

ಕ್ರಿಕೆಟ್ ಮೈದಾನ ಮತ್ತು ಬೌಂಡರಿ ಲೈನ್ ಮೀರಿದ ಜೀವನದಲ್ಲಿ ರಾಹುಲ್ ದ್ರಾವಿಡ್ ಸರ್ ದೊಡ್ಡ ಪಾತ್ರ ವಹಿಸಿದ್ದಾರೆ. ಸ್ವತಃ ಶಿಸ್ತುಬದ್ಧ ಕ್ರೀಡಾಪಟು, ರಾಹುಲ್ ಸರ್ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಾನು ಅವರಿಂದ ಆಟದ ಮಾನಸಿಕ ಅಂಶದ ಬಗ್ಗೆ ಬಹಳಷ್ಟು ಕಲಿತಿದ್ದೇನೆ. ಅಂಡರ್-19 ಅವಧಿಯ ಮೂರು-ನಾಲ್ಕು ವರ್ಷಗಳಲ್ಲಿ ನಾನು ಅವರಿಂದ ಬಹಳಷ್ಟು ಸಂಗತಿಗಳನ್ನು ಕಲಿತಿರುವೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕೂಡ ಅನೇಕ ವಿಚಾರಗಳನ್ನು ತಿಳಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಫ್ರೀ ಟೈಮ್‍ನಲ್ಲಿ ನಾನು ಅವರನ್ನು ಭೇಟಿಯಾಗಿ ಕೆಲವು ಸಲಹೆ ಪಡೆಯುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *