ಬೆಂಗಳೂರು: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವನ್ನಪ್ಪಿದ್ದು, ಇದೀಗ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಯುವತಿಯನ್ನು ತೇಜಸ್ವಿನಿ(20) ಎಂದು ಗುರುತಿಸಲಾಗಿದೆ. ತೇಜಸ್ವಿನಿ ಕೈಗೆ ಗಾಯವಾಗಿತ್ತು. ಹೀಗಾಗಿ ಆಕೆಯನ್ನು ಇಂದು ಬೆಳಗ್ಗೆ ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಯುವತಿ ಸಾವನ್ನಪ್ಪಿದ್ದು, ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
Advertisement
Advertisement
ತೇಜಸ್ವಿನಿ ಅಂತಿಮ ವರ್ಷದ ಬಿಇ ಓದುತ್ತಿದ್ದಾಳೆ. ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ತೇಜಸ್ವಿನಿಗೆ ಆಪರೇಷನ್ ಮಾಡಬೇಕೇಂದು ಆಸ್ಪತ್ರೆ ಸಿಬ್ಬಂದಿ ಅನಾಸ್ತೇಶಿಯಾ ನೀಡಿದ್ದಾರೆ. ಎರಡು ಗಂಟೆ ಬಳಿಕ ನಿಮ್ಮ ಮಗಳು ಬದುಕಿಲ್ಲ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಮಾರತಹಳ್ಳಿ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಆಸ್ಪತ್ರೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ಜಟಾಪಟಿ ನಡೆದಿದೆ. ನಮಗೆ ವಿಷ ಕೊಡಿ ಇಲ್ಲ ನ್ಯಾಯ ಕೊಡಿಸಿ ಎಂದು ತೇಜಸ್ವಿನಿ ಪೋಷಕರು ಆಸ್ಪತ್ರೆ ಒಳಗೆ ಪ್ರತಿಭಟನೆಗೆ ಕುಳಿತಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
Advertisement
ದೇಹ ತುಂಬಾ ಇಂಜೆಕ್ಷನ್ ಮಾಕ್ರ್ಸ್ ಗಳಿದೆ. ಹೈ ಡೋಸ್ ಕೊಟ್ಟೇ ನಮ್ಮ ಮಗಳು ಸತ್ತಿರೋದು. ಬೆಳಗ್ಗೆ 4 ಗಂಟೆಗೆ ಆಸ್ಪತ್ರೆಗೆ ಸೇರಿಸಿದ್ವಿ. 11.40ಕ್ಕೆ ನಿಮ್ಮ ಮಗಳಿಗೆ ಸೀರಿಯಸ್ ಆಗಿದೆ ಅಂತ ಫೋನ್ ಬಂತು. ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡ್ತೇವೆ ಅಂತಾ ಹೇಳಿದ್ರು. ನಾವು ಸರಿ ಅಂತಾ ಹೇಳಿದ್ವಿ. ಅದಾದ ಬಳಿಕ ಒಂದು ಫೋನ್ ಬರಲಿಲ್ಲ. ಬಂದು ವಿಚಾರಿಸಿದಾಗ ನಿಮ್ಮ ಮಗಳು ಇಲ್ಲ ಅಂತಾ ಹೇಳಿದ್ರು. ಮ್ಯಾಸೀವ್ ಹಾರ್ಟ್ ಅಟ್ಯಾಕ್ ಆಗಿದೆ ಅಂದ ಹೇಳಿದ್ರು. ಅನಾಸ್ತೇಷಿಯ ಕೊಟ್ಟ ಬಳಿಕ ಎದೆ ನೋವು ಅಂತಾ ಹೇಳಿದ್ರು. ಆಮೇಲೆ ಸತ್ತಿದ್ದಾರೆ ಅಂತಾ ಆಸ್ಪತ್ರೆಯವರು ಹೇಳುತ್ತಿದ್ದಾರೆ. ಇದು ಆಸ್ಪತ್ರೆ ನಿರ್ಲಕ್ಷದಿಂದಲೇ ಆಗಿರೋದು ಎಂದು ಯುವತಿ ಚಿಕ್ಕಪ್ಪ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಆಸ್ಪತ್ರೆಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಭೇಟಿ ನೀಡಿ ನ್ಯಾಯ ಕೊಡಿಸುವ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಪೋಷಕರ ಮನವೊಲಿಸಿದ್ದಾರೆ. ಈಗಾಗಲೇ ಆಸ್ಪತ್ರೆ ವೈದ್ಯರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಠಾಣೆಯಲ್ಲಿ ಬಂಧಿಯಾಗಿರೋ ವೈದ್ಯರ ಫೋಟೋ ತೋರಿಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ವೀಡಿಯೋ ಕಾಲ್ ಮಾಡಿ ಬಂಧಿತ ವೈದ್ಯರನ್ನ ಪೊಲೀಸತು ತೇಜಸ್ವಿನಿ ಪೋಷಕರಿಗೆ ತೋರಿಸಿದ್ದಾರೆ.