ಕಿಯೋಝರ್ (ಒಡಿಶಾ): ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡುವ ಅಸಹ್ಯಕರ ಪ್ರವೃತ್ತಿ ಒಡಿಶಾದಲ್ಲಿ ಮತ್ತೆ ಮುಂದುವರೆದಿದೆ. ಇಲ್ಲಿನ ನುವಾಗಾಂವ್ ಎಂಬಲ್ಲಿ ಈ ಘಟನೆ ನಡೆದಿದ್ದು, ಕೆಲ ದಿನಗಳ ಹಿಂದೆ ನಡೆದ ಕೃತ್ಯದ ವೀಡಿಯೋ ಈಗ ವೈರಲ್ ಆಗಿದೆ.
ಇಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ ಯುವ ಜೋಡಿಗಳಿಬ್ಬರು ಪರಸ್ಪರ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ತಂಡವೊಂದು ಇವರಿಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಇವರು ಈ ಜೋಡಿಯ ಬಟ್ಟೆ ಬಿಚ್ಚಲು ಆರಂಭಿಸಿದ್ದಾರೆ. ನಮಗೇನೂ ತೊಂದರೆ ಕೊಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೇಳಿಸಿಕೊಳ್ಳಲೇ ಇಲ್ಲ. ಬದಲಾಗಿ ಇವರ ಬಟ್ಟೆ ಬಿಚ್ಚುವುದನ್ನು ವೀಡಿಯೋ ಮಾಡುವುದರ ಜೊತೆಗೆ ಜೋಡಿಯ ಗುಪ್ತಾಂಗಗಳ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾರೆ. ಹೀಗೆಲ್ಲಾ ಮಾಡಬೇಡಿ ಎಂದು ಯುವತಿಯ ಜೊತೆಗಿದ್ದ ಯುವಕ ಪರಿಪರಿಯಾಗಿ ಬೇಡಿಕೊಂಡರೂ ಗುಂಪಲ್ಲಿದವರು ಕೇಳಿಸಿಕೊಳ್ಳಲೇ ಇಲ್ಲ. ಇದಕ್ಕೆ ಪ್ರತಿಭಟಿಸಿದಾಗ ಆ ಗುಂಪು ಯುವತಿ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಚಿತ್ರೀಕರಿಸಿದ ತಂಡ ಬಳಿಕ ಅಲ್ಲಿಂದ ಪರಾರಿಯಾಗಿತ್ತು.
ಈ ವೀಡಿಯೋ ಗುರುವಾರ ವೈರಲ್ ಆಗಿದ್ದು, ಸ್ಥಳೀಯರು ಈ ದೃಶ್ಯಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆದರೆ ಇದುವರೆಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮಹಿಳೆಯೊಬ್ಬಳನ್ನು ಅರಣ್ಯದಲ್ಲಿ ಬಟ್ಟೆ ಬಿಚ್ಚಿಸಿ ಬೆದರಿಕೆ ಹಾಕಿದ್ದ ವೀಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ವೇಳೆ ಒಡಿಶಾ ಡಿಜಿಪಿ ಪ್ರಕರಣದ ತನಿಖೆಗೆ ಆದೇಶಿಸಿದ್ದರೂ ಇದುವರೆಗೆ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಈ ವೀಡಿಯೋ ಕೂಡಾ ವೈರಲ್ ಆಗುತ್ತಿರುವುದರಿಂದ ಜನ ಗಾಬರಿಗೊಳಗಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: https://www.instagram.com/publictvnews