ಕೊಪ್ಪಳ: ಬೆಂಕಿ ಪೊಟ್ಟಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಹೊರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಡಿಸೆಂಬರ್ 17 ರಂದು ಈ ಘಟನೆ ನಡೆದಿದೆ.
ಡಿ.17 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಕಟ್ಟಲು ಹೋಗುವಾಗ ಬೆಂಕಿಪೊಟ್ಟಣ ಇಲ್ಲ ಎಂದು ರಾಜೇಶ್, ಪಕ್ಕದಲ್ಲೆ ಇರುವ ಬುಡ್ಡಪ್ಪ ಎಂಬವರ ಹೋಟೆಲ್ ಗೆ ಬಂದು ಅಲ್ಲೆ ಇದ್ದ ಬೆಂಕಿ ಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದನು. ಈ ವೇಳೆ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ರಾಜೇಶನನ್ನು ಹಿಡಿದು, ಬೆಂಕಿಪೊಟ್ಟಣ ಕಳವು ಮಾಡುತ್ತೀಯಾ ಎಂದು ಥಳಿಸಿದ್ದಾರೆ.
ವಿಷಯ ತಿಳಿದ ರಾಜೇಶನ ತಂದೆ ಆ ಮೇಲೆ ಮಾತಾಡೋಣ ಎಂದು ಸಮಾಧಾನ ಮಾಡಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದ ರಾಜೇಶ್ ಕೆಲ ಹೊತ್ತಿನಲ್ಲೇ ತಮ್ಮ ಹೊಲಕ್ಕೆ ಹೋಗಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೇವಲ ಬೆಂಕಿಪೊಟ್ಟಣ ಕಳ್ಳತನ ಆರೋಪ ಹೊರಿಸಿ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆಂದು ರಾಜೇಶ್ ತಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಕಳ್ಳತನ ಆರೋಪ ಹೊರಿಸಿದ್ದ ಬುಡ್ಡಪ್ಪ, ಶೇಖರಪ್ಪ, ಲಕ್ಷ್ಮಿ, ಶಾಂತಮ್ಮ ಎಂಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv