– ಸರ್ಕಾರದಿಂದ ವೆಬ್ ಪೋರ್ಟಲ್
ಬೆಂಗಳೂರು: ನಗರದ ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯ. ಈಗಾಗಲೇ ಬೆಂಗಳೂರಿನ ಸರ್ವಪಕ್ಷ ಶಾಸಕರ ಸಭೆ ಮಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಬ್ರ‍್ಯಾಂಡ್ ಬೆಂಗಳೂರಿಗೆ (Brand Bengaluru) ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನ ಎಲ್ಲಾ ವರ್ಗಗಳ ಬ್ರ‍್ಯಾಂಡ್ ಅಂಬಾಸಿಡರ್‌ಗಳ ಜೊತೆ ಚರ್ಚಿಸಿದ್ದೇನೆ. ಇವರ ಜೊತೆಗೆ ಸಾರ್ವಜನಿಕರ ಅಭಿಪ್ರಾಯವೂ ಮುಖ್ಯ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಲು ಪೋರ್ಟಲ್ ಆರಂಭಿಸುತ್ತಿದ್ದೇವೆ ಎಂದರು.
ಬೆಂಗಳೂರಿನ ನಾಗರಿಕರು ಹಾಗೂ ವಿದೇಶದಲ್ಲಿರುವ ಕನ್ನಡಿಗರು ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ತಮ್ಮ ಸಲಹೆಗಳನ್ನು https://www.brandbengaluru.karnataka.gov.in/ ವೆಬ್‌ಸೈಟ್‌ನಲ್ಲಿ ನಿಗದಿತ ಕಾಲಮಿತಿ ಜೂನ್ 30ರ ಒಳಗಾಗಿ ನೀಡಬೇಕು ಎಂದು ವಿನಂತಿಸುತ್ತೇನೆ ಎಂದು ಡಿಕೆಶಿ ಮನವಿ ಮಾಡಿದರು.
ಶಾಸಕರು, ಅಧಿಕಾರಿಗಳು, ಅಂಬಾಸಿಡರ್‌ಗಳ ಸಭೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೈಡೆನ್ಸಿಟಿ ಕಾರಿಡಾರ್, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣದಂತಹ ಸಲಹೆ ನೀಡಿದ್ದಾರೆ. ಸ್ವಚ್ಛತೆ, ಪರಿಸರ ವಿಚಾರದಲ್ಲಿ ಕಸ ವಿಲೇವಾರಿ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಕೊಳಗೇರಿ ಪ್ರದೇಶ ಅಭಿವೃದ್ಧಿ ಸೇರಿದಂತೆ ದಕ್ಷ ಆಡಳಿತ, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ವಿಕಾಸ ಸೌಧದಲ್ಲಿ ಇಂದು ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದೆ. ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ https://t.co/wqSAJ1Jcbn ಎನ್ನುವ ವೆಬ್ ಪೋರ್ಟಲ್‌ಅನ್ನು ಆರಂಭಿಸಲಾಗಿದೆ.
ಬೆಂಗಳೂರಿನ… pic.twitter.com/F5eoxhwUTz
— DK Shivakumar (@DKShivakumar) June 21, 2023
ಈ ನಡುವೆ ಕೆಲವು ದೊಡ್ಡ ನಾಯಕರ ಮನೆಗೆ ಹೋಗಿ ಚರ್ಚೆ ಮಾಡಲು ತೀರ್ಮಾನಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಇನ್ನು ಕೆಲವರನ್ನು ಭೇಟಿ ಮಾಡಬೇಕು. ಬೊಮ್ಮಾಯಿ ಅವರ ಸಮಯ ಕೇಳಿದ್ದು, ಅವರು ಬ್ಯುಸಿ ಇದ್ದ ಕಾರಣ ಭೇಟಿ ಮಾಡಿಲ್ಲ. ಅವರ ವಿಚಾರಧಾರೆಗಳನ್ನು ತಿಳಿಯಬೇಕು ಎಂದು ಟಾಂಗ್ ಕೊಟ್ಟರು.
ಪಾಲಿಕೆ ಮಟ್ಟದಲ್ಲಿ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಪ್ರಶ್ನಿಸಿದಾಗ, ನಾನು ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಕೆಲವರು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬಹುದು ಎಂದು ಚರ್ಚೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಈ ಬಾರಿ ಮಳೆ ಬಂದರೆ ಕಳೆದ ವರ್ಷಗಳಂತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲವೇ ಎಂಬ ಪ್ರಶ್ನೆಗೆ, ನಿನ್ನೆಯವೆರೂ ಕೇವಲ ಬಡವರ ಮೇಲೆ ಮಾತ್ರ ರಾಜಕಾಲುವೆ ತೆರವು ಮಾಡುತ್ತಿದ್ದೀರಿ ಎಂದು ನೀವು ನನ್ನ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಿರಿ. ನಿನ್ನೆ ಕೆಲವು ರೆಸಾರ್ಟ್ ಹಾಗೂ ಇತರ ಪ್ರದೇಶಗಳಲ್ಲಿ ರಾಜಕಾಲುವೆ ತೆರವು ಮಾಡಿದ್ದೇವೆ. ಈ ಪ್ರದೇಶವನ್ನು ನಾನು ಹೋಗಿ ಗುರುತು ಮಾಡಿರಲಿಲ್ಲ. ಕಂದಾಯ ಅಧಿಕಾರಿಗಳು ಗುರುತು ಮಾಡಿದ್ದು, ಅದರ ಆಧಾರದ ಮೇಲೆ ರಾಜಕಾಲುವೆ ತೆರವು ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಈ ವಿಚಾರದಲ್ಲಿ ಕೆಲಸ ಮಾಡಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ನಿನ್ನೆ ಅತಿಯಾದ ಮಳೆಯಿಂದಾಗಿ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಎರಡು ವಿಚಾರವಾಗಿ ನಿರ್ಧಾರ ಕೈಗೊಳ್ಳಬೇಕು. ಸಿಡಿಪಿ ಹಾಗೂ ಕಂದಾಯ ಇಲಾಖೆ ಒಂದಾಗಿ ಕೆಲಸ ಮಾಡಬೇಕು. ಇರಡು ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಸರ್ವರ್ ಹ್ಯಾಕ್ ಹೇಳಿಕೆ – ರಾಜಕೀಯದಲ್ಲಿ ಇಂತಹ ಸ್ಟೇಟ್‌ಮೆಂಟ್‌ಗಳು ಇದ್ದೇ ಇರುತ್ತೆ: ಸತೀಶ್ ಜಾರಕಿಹೊಳಿ ಯೂಟರ್ನ್
ಮಾಸ್ಟರ್ ಪ್ಲಾನ್ ಯಾವಾಗ ನಿರ್ಧಾರವಾಗುತ್ತದೆ ಎಂದು ಕೇಳಿದಾಗ, ಒಂದೇ ದಿನದಲ್ಲಿ ಎಲ್ಲವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹಂತಹಂತವಾಗಿ ಕೆಲಸ ಮಾಡೋಣ ಎಂದರು. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕೇಬಲ್‌ಗಳ ರಾಶಿ ಕುರಿತು ಕೇಳಿದ ಪ್ರಶ್ನೆಗೆ, ನಾನು ಇಂಧನ ಸಚಿವನಾಗಿದ್ದಾಗ ಕೇಬಲ್ ಹಾವಳಿ ನೋಡಿದ್ದೇನೆ. ತಮ್ಮನ್ನು ಯಾರೂ ಮುಟ್ಟಲು ಆಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಬಗ್ಗೆ ಆಲೋಚನೆ ಮಾಡಲಾಗುತ್ತಿದ್ದು, ಮಾಧ್ಯಮಗಳು ಸಹಕಾರ ನೀಡಿದರೆ ಎಲ್ಲ ಕೇಬಲ್ ಕಟ್ ಮಾಡಿಸುತ್ತೇನೆ ಎಂದು ತಿಳಿಸಿದರು.
ರಾಜಕಾಲುವೆ ತೆರವು ವಿಚಾರದಲ್ಲಿ ಸರ್ಕಾರದ ಅಧಿಕಾರಿಗಳೇ ಒತ್ತುವರಿಗೆ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ಸೂಕ್ತ ಉದಾಹರಣೆ, ಪ್ರಕರಣಗಳ ಬಗ್ಗೆ ದೂರು ಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಅನುಮತಿ ನೀಡಿದ ಅನೇಕ ಅಧಿಕಾರಿಗಳು ನಿವೃತ್ತಿ ಹೊಂದಿರುತ್ತಾರೆ. ಅನೇಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿವೆ ಎಂದು ಉತ್ತರಿಸಿದರು.
ತೆರಿಗೆ ಹೆಚ್ಚಳ ಹಾಗೂ ಕಸ ಸಂಗ್ರಹಕ್ಕೆ ತೆರಿಗೆ ಪಾವತಿ ವಿಚಾರವಾಗಿ ಕೇಳಿದ ಬಗ್ಗೆ, ಒಂದೊಂದು ರಾಜ್ಯಗಳಲ್ಲಿ ಒಂದೊಂದು ಮಾದರಿ ಅಳವಡಿಸಿಕೊಳ್ಳಲಾಗಿದೆ. ಬಹಳ ಜನ ನಮ್ಮ ಬಳಿ ಹಣ ಪಡೆದರೂ ಸರಿ, ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಿ ಎಂದು ಕೇಳುತ್ತಿದ್ದಾರೆ. ಅಪಾರ್ಟ್ಮೆಂಟ್‌ಗಳಲ್ಲಿ ನಿರ್ವಹಣೆಗಾಗಿ ಪ್ರತ್ಯೆಕ ಹಣ ಸಂಗ್ರಹಿಸಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ ಇಂಧನ ಬೆಲೆ ಏರಿಕೆಯಾದಂತೆ ದರ ಏರಿಕೆಗೆ ಅಧಿಕಾರ ನೀಡಲಾಗಿದೆ. ಆದರೆ ನೀರು ಹಾಗೂ ಆಸ್ತಿ ತೆರಿಗೆ ವಿಚಾರವಾಗಿ ಆ ಅಧಿಕಾರ ನೀಡಿಲ್ಲ ಎಂದು ಹೇಳಿದರು.
ವಾರ್ಡ್‌ಗಳ ಮರುವಿಂಗಡಣೆ ವಿಚಾರವಾಗಿ ನ್ಯಾಯಾಲಯ ಗಡವು ನೀಡಿರುವ ಬಗ್ಗೆ ಕೇಳಿದಾಗ, ಇದಕ್ಕಾಗಿ ನಾವು ಸಮಿತಿ ರಚನೆ ಮಾಡಿದ್ದೇವೆ. ಈ ವಿಚಾರವಾಗಿ ಮುಂದೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಬ್ರ‍್ಯಾಂಡ್ ಬೆಂಗಳೂರಿನಲ್ಲಿ ಹಸಿರು ನಗರವಾಗಿ ಪರಿವರ್ತಿಸಲು ಯೋಜನೆ ಇದೆಯೇ ಎಂದು ಕೇಳಿದಾಗ, ಈ ವಿಚಾರವಾಗಿ ನಿಮ್ಮ ಬಳಿ ಯಾವುದಾದರೂ ಉತ್ತಮ ಸಲಹೆ ಇದ್ದರೆ ನೀಡಿ. ನಾವು ಅದನ್ನು ಸ್ವಾಗತಿಸುತ್ತೇವೆ. ಹಸಿರು ಬೆಂಗಳೂರು ನಿರ್ಮಾಣಕ್ಕೂ ನಾವು ಸಾರ್ವಜನಿಕರ ಅಭಿಪ್ರಾಯ ಕೇಳಿದ್ದೇವೆ. ಬೆಂಗಳೂರನ್ನು ಮತ್ತೆ ಹಸಿರು ನಗರವನ್ನಾಗಿ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಅಕ್ಕಿ ಕೊಡಲು ಆಗದಿದ್ರೆ ಅಧಿಕಾರ ಬಿಟ್ಟು ತೊಲಗಿ: ಕಾಂಗ್ರೆಸ್ ವಿರುದ್ಧ ಶೋಭಾ ಕಿಡಿ