Latest
ಗುಡ್‍ಮಾರ್ನಿಂಗ್ ಮೆಸೇಜ್ ನೋಡದ ಸಂಸದರಿಗೆ ಮೋದಿ ಕ್ಲಾಸ್!

ನವದೆಹಲಿ: ತಾನು ಕಳುಹಿಸಿದ ಬೆಳಗಿನ ಶುಭಾಶಯ ಸಂದೇಶವನ್ನು ವೀಕ್ಷಿಸದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಂಸತ್ ಅಧಿವೇಶನದ ಮುನ್ನ ಬಿಜೆಪಿಯ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲ ಸಂದರ್ಭದಲ್ಲಿ ನಾನು ಸಂದೇಶ ಕಳುಹಿಸುತ್ತಿರುತ್ತೇನೆ. ಆದರೆ ಕೆಲ ಸಂಸದರು ಮಾತ್ರ ನನ್ನ ಸಂದೇಶಕ್ಕೆ ಪ್ರತಿಯಾಗಿ ಉತ್ತರ ಕಳುಹಿಸುತ್ತಾರೆ. ಯಾಕೆ ಎಲ್ಲರು ಉತ್ತರ ಕಳುಹಿಸುವುದಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ನಾನು ಕಳುಹಿಸಿದ ಮೆಸೇಜ್ ನಲ್ಲಿ ಕೆಲವೊಮ್ಮೆ ಬಹಳ ಮುಖ್ಯವಾದ ವಿಚಾರವನ್ನು ತಿಳಿಸಿರುತ್ತೇನೆ. ನಿಮ್ಮಿಂದ ಪ್ರತಿಕ್ರಿಯೆ ಸಿಗದೇ ಇದ್ದಾಗ ಆ ವಿಚಾರದ ಬಗ್ಗೆ ಚರ್ಚೆಯೆ ನಡೆಯುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಎಲ್ಲ ಸಂಸದರು ಮೋದಿ ಆ್ಯಪನ್ನು ಬಳಸುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ತಮ್ಮ ಸಹ ಸಂಸದರಿಗೆ ಮೋದಿ ಆ್ಯಪ್ ಬಳಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವುದು, ಮನ್ ಕೀ ಬಾತ್ ಕಾರ್ಯಕ್ರಮ ಕೇಳುವುದು, ಸರ್ಕಾರ ಯೋಜನೆಗಳು ಹಾಗೂ ಅವುಗಳ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುವನ್ನು ವಿವರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ ಬಿಜೆಪಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮೋದಿ ಅವರ ಸಲಹೆ ಎಲ್ಲರೂ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಎಸ್‍ಎಸ್ ಅಹ್ಲುವಾಲಿಯಾ ಅವರು ನರೇಂದ್ರ ಮೋದಿ ಆ್ಯಪ್ ಉತ್ತಮವಾಗಿದ್ದು, ನಾನು ನಿರಂತರವಾಗಿ ಸಕ್ರಿಯವಾಗಿ ಬಳಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಮೋದಿ ಸದನದ ಗೈರು ಹಾಜರಿ ವಿಚಾರವನ್ನು ಪ್ರಸ್ತಾಪಿಸಿ, ನಿಮ್ಮ ಒಂದು ದಿನದ ಗೈರು ಹಾಜರಿ 2019 ರ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್ ಪಡೆಯುವ ಅವಕಾಶವನ್ನು ತಪ್ಪಿಸಬಹುದು ಎಂದು ಹೇಳಿ ಎಚ್ಚರಿಕೆ ನೀಡಿದ್ದರು.
2015ರಲ್ಲಿ ನರೇಂದ್ರ ಮೋದಿ ಅಪ್ಲಿಕೇಶನ್ ಬಿಡುಗಡೆಯಾಗಿತ್ತು.
