– ಏ.2ರಿಂದ ವಾಹನಗಳ ಆಮದು ಸುಂಕ ಶೇ.25 ರಷ್ಟು ಹೆಚ್ಚಳ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಟ್ರಂಪ್ (Donald Trump) ಅಧಿಕಾರಕ್ಕೆ ಏರಿದ ದಿನದಿಂದಲೂ ಭಾರತದೊಂದಿಗೆ ಸುಂಕ ಹೆಚ್ಚಳ ವಿಚಾರದಲ್ಲಿ ಘರ್ಷಣೆ ನಡೆಯುತ್ತಲೇ ಇದೆ. ಆದ್ರೆ ಈಗ ಅಚ್ಚರಿ ಎನ್ನುವಂತೆ ಟ್ರಂಪ್, ಭಾರತದ ಪ್ರಧಾನಿ ಮೋದಿ (Narendra Modi) ಅವರ ಗುಣಗಾನ ಮಾಡಿರುವುದು ಅಚ್ಚರಿವುಂಟುಮಾಡಿದೆ.
ಮೋದಿ, ತುಂಬಾ ಸ್ಮಾರ್ಟ್ ಮ್ಯಾನ್, ನನ್ನ ಒಳ್ಳೇ ಸ್ನೇಹಿತ ಕೂಡ ಹೌದು. ಇತ್ತೀಚೆಗೆ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಚರ್ಚೆ ನಡೆಸಿದ್ದೇವೆ. ಇದು ಭಾರತ ಮತ್ತು ನಮ್ಮ ದೇಶದ ನಡುವೆ ಉತ್ತಮ ಬಾಂಧವ್ಯಕ್ಕೆ ಕಾರಣವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಭಾರತ ಒಬ್ಬ ಶ್ರೇಷ್ಠ ಪ್ರಧಾನಿಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ.
ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು (Tariffs) ಅತ್ಯಂತ ನ್ಯಾಯಸಮ್ಮತವಲ್ಲದ್ದು ಹಾಗೂ ಪ್ರಬಲ ಎಂದಿದ್ದಾರೆ. ಜೊತೆಗೆ ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದರು.
ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನ್ನದು. ಆದರೆ ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ ಎಂದು ಈ ಮೊದಲು ಹೇಳಿಕೆ ನೀಡಿದ್ದರು.
ಕೆಲ ದಿನಗಳ ಹಿಂದೆಯಷ್ಟೇ ಟ್ರಂಪ್, ಭಾರತವು ಅಮೆರಿಕ ಆಮದು ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲವೆಂದು ಭಾರತ ಘೋಷಿಸಿತ್ತು.