ಬೆಳಗಾವಿ: ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಏಕವಚನದಲ್ಲೇ ವಿಜಯೇಂದ್ರ (B.Y.Vijayendra) ವಿರುದ್ಧವೇ ಗುಡುಗಿದ್ದಾರೆ.
ಗೋಕಾಕ್‌ನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಯಡಿಯೂರಪ್ಪ (Yediyurappa) ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂದಿಗೂ ಯಡಿಯೂರಪ್ಪನವರು ನಮ್ಮ ನಾಯಕ. ನಾನು ಅವರ ಮೇಲೆ ಅಗೌರವದಿಂದ ಮಾತನಾಡಿಲ್ಲ. ಆದರೆ ನೀನು ಸುಳ್ಳು ಹೇಳುವುದನ್ನು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ನಿನ್ನ ಮನೆಯ ಮುಂದೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲ ಗನ್ ಮ್ಯಾನ್ ಬರಲ್ಲ, ನಾನೊಬ್ಬನೇ ಬರುತ್ತೇನೆ. ಅಲ್ಲಿಂದಲೇ ಪ್ರವಾಸ ಶುರು ಮಾಡುತ್ತೇನೆ ತಡಿ ನೋಡೊಣ ಎಂದು ಸವಾಲೆಸೆದರು.
ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ಶಕ್ತಿ ನನಗಿದೆ ಎಂದು ಗುಡುಗಿದ ಜಾರಕಿಹೊಳಿ, ನಿನ್ನಂತ ಕೀಳು ಮಟ್ಟದ ರಾಜಕೀಯ ಮಾಡಲು ನನಗೆ ಬರಲ್ಲ. ವಿಜಯೇಂದ್ರ ಬಗ್ಗೆ ಗೌರವ ಇಲ್ಲ. ಅಧ್ಯಕ್ಷ ಸ್ಥಾನದ ಮೇಲೆ ಮಾತ್ರ ಗೌರವ ಇದೆ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ನೀಡಲಿ. ಯಡಿಯೂರಪ್ಪನವರೇ ಇನ್ನು ನೀವು ಸಿಎಂ ಆಗಲ್ಲ ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಎಂದು ಹೇಳಬೇಡಿ ಅದರ ಎರಡು ಪಟ್ಟು ಲಾಭ ಪಡೆದುಕೊಂಡಿದ್ದಿರಿ ಎಂದರು. ಇದನ್ನೂ ಓದಿ: 60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್
ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ. ನಾನು ನಿಮ್ಮ ಅಪ್ಪನನ್ನು ಸಿಎಂ ಮಾಡಲು ಬಂದಿದ್ದೆ. ನೀನು ಅದೇ ಹರಾಮಿ ದುಡ್ಡಲ್ಲಿ ಓಡಾಡ್ತಿದ್ದಿಯಾ ಎಂದು ವಾಗ್ದಾಳಿ ನಡೆಸಿದರು.
ಒಬ್ಬ ಬಹುಸಂಖ್ಯಾತ ಯತ್ನಾಳ್ ಇದ್ದಾರೆ ಅದಕ್ಕಾಗಿ ಅವರನ್ನ ಒಪ್ಪಿಕೊಂಡಿದ್ದೇನೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ನೀನು ಸಣ್ಣ ಹುಡುಗ ನಿನಗೆ ಅಧ್ಯಕ್ಷ ಸ್ಥಾನ ನೀಗುವುದಿಲ್ಲ. ಹೈಕಮಾಂಡ್ ಮುಂದುವರೆಸಿದರೆ ಆಗಲಿ ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. 2028 ಕ್ಕೆ ಪಕ್ಷ ಅಧಿಕಾರ ತರಲು ಕೆಲಸ ಮಾಡ್ತಿನಿ ನನ್ನಿಂದ ತಪ್ಪಾಗಿದ್ದರೆ ಕ್ಷೇತ್ರದ ಜನರಲ್ಲಿ ಕ್ಷೇಮ ಕೇಳುತ್ತೇನೆ ಎಂದರು.