ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶಗೌಡರನ್ನು ಹತ್ಯೆ ಮಾಡಿ ಜೈಲಿನಲ್ಲಿರುವ ಆರೋಪಿಗಳನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ ಮೂವರನ್ನು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಜೂನ್ 15 ರಂದು ಧಾರವಾಡ-ಹುಬ್ಬಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯ ಯೋಗಿಶ್‍ಗೌಡರ ಕೊಲೆಯಾಗಿತ್ತು. ಕೊಲೆ ಮಾಡಿದ ಆರೋಪಿಗಳಾದ ಬಸವರಾಜ್ ಮುತ್ತಗಿ, ಕೀರ್ತಿ, ವಿನಾಯಕ್, ಮುದಕಪ್ಪ ಮತ್ತು ಸಂದೀಪ್ ಎಂಬುವರು ಸದ್ಯ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಬಸವರಾಜ್ ಮತ್ತು ಅವನ ಸಹಚರರನ್ನು ಕೊಲೆ ಮಾಡಲು ಯೋಗಿಶಗೌಡನ ಸಹೋದರ ಗುರುನಾಥ್ ಗೌಡ ತನ್ನ ಸಹಚರರಾದ ಹನುಮಂತ್, ಲಕ್ಷ್ಮಣ್ ಹಾಗೂ ಸಂಜಯ್ ಎಂಬುವರ ಸಹಾಯದಿಂದ ಕೊಲೆ ಮಾಡಲು ಪ್ಲಾನ್ ಮಾಡಿದ್ದ, ಇವರೆಲ್ಲರೂ ಜೈಲಿನಲ್ಲಿರುವ ತಮ್ಮ ಸಹಚರರಿಗೆ ಬರ್ತ್ ಡೇ ಕೇಕ್‍ನಲ್ಲಿ ಗನ್ ಮತ್ತು ಗುಂಡುಗಳನ್ನು ಕಳಿಸಲು ಸಂಚು ಮಾಡಿದ್ದರು.
ಈ ನಾಲ್ವರ ಪ್ಲಾನ್ ಆಡಿಯೋ ಟೇಪ್ ಪೊಲೀಸರಿಗೆ ಸಿಕ್ಕಿದ್ದು, ಹನುಮಂತ್, ಲಕ್ಷ್ಮಣ್ ಹಾಗೂ ಸಂಜಯ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಗುರುನಾಥ್ ಗೌಡ 3 ಪಿಸ್ತೂಲಗಳ ಜೊತೆ ಪರಾರಿಯಾಗಿದ್ದಾನೆ.
ಗುರುನಾಥ್ ಗೌಡನ ಗೋವನಕೊಪ್ಪದ ಮನೆಯಲ್ಲಿ ಡಿಎಸ್‍ಪಿ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಮನೆಯಲ್ಲಿ 9 ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಸ್ತ್ರಾಸ್ತ್ರ ಇಟ್ಟಿರುವ ಆರೋಪದ ಮೇಲೆ ಒಬ್ಬನನ್ನು ಮತ್ತು ಕೊಲೆ ಮಾಡಲು ಸಂಚು ರೂಪಿಸಿದ ಆಧಾರದಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಗುರುನಾಥ್ ಗೌಡನ ಬಂಧನಕ್ಕೆ ಜಾಲ ಪೊಲೀಸರು ಬಲೆ ಬೀಸಿದ್ದಾರೆ.