LatestMain PostNational

ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜಾಹೀರಾತುಗಳಿಗೆ ಅನವಶ್ಯಕವಾಗಿ ಕೋಟ್ಯಂತರ ವೆಚ್ಚ ಮಾಡುತ್ತಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಕೆಗೆ ಆಮ್‌ ಆದ್ಮಿ ಪಕ್ಷ (ಎಎಪಿ) ತಿರುಗೇಟು ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಎಪಿ, ದೆಹಲಿ ಸರ್ಕಾರ ವಾರ್ಷಿಕವಾಗಿ ಜಾಹೀರಾತಿಗೆ 70 ಕೋಟಿ ರೂ. ಮಾತ್ರ ವೆಚ್ಚ ಮಾಡಿದೆ. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ವಾರ್ಷಿಕವಾಗಿ ಜಾಹೀರಾತಿಗೆ 2,000 ಕೋಟಿ ರೂ. ವಿನಿಯೋಗಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಬಿಜೆಪಿಯಿಂದ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ: ಅಮಿತ್ ಶಾ

ಬಿಜೆಪಿ ನೇತೃತ್ವದ ದೆಹಲಿ ನಗರಪಾಲಿಕೆಯು ವಿಶ್ವದಲ್ಲೇ ಅತ್ಯಂತ ಭ್ರಷ್ಟ ಪಾಲಿಕೆಯಾಗಿದೆ. ಭ್ರಷ್ಟಾಚಾರದ ಹಣವೆಲ್ಲ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಜಾಹೀರಾತುಗಳಿಗೆ ಹಣ ವ್ಯಯಿಸುತ್ತಿರುವ ಬಿಜೆಪಿ ನಾಯಕರ ಜಾಹೀರಾತುಗಳೇ ದೆಹಲಿಯಾದ್ಯಂತ ತುಂಬಿವೆ ಎಂದು ಎಎಪಿ ಆರೋಪಿಸಿದೆ.

ದೆಹಲಿಯ ಪತ್ರಿಕೆಗಳಲ್ಲಿ ನಿತ್ಯ ಯೋಗಿ ಜಿ ಮತ್ತು ಮೋದಿ ಜಿ ಅವರ ಜಾಹೀರಾತುಗಳೇ ಇರುತ್ತವೆ. ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ 108 ಜಾಹೀರಾತು ಫಲಕಗಳಿವೆಯಷ್ಟೆ. ಆದರೆ ಮೋದಿ ಜಿ ಮತ್ತು ಯೋಗಿ ಜಿ ಅವರಿಗೆ ಸಂಬಂಧಿಸಿದಂತೆ 850 ಜಾಹೀರಾತು ಫಲಕಗಳಿವೆ. ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ ಸಿಎಂ. ಆದರೆ ದೆಹಲಿಯಲ್ಲಿ ಯಾಕೆ ಜಾಹೀರಾತುಗಳನ್ನು ನೀಡುತ್ತಾರೆ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ನನ್ನ ಸಲಹೆಯನ್ನು ಒಪ್ಪಿಕೊಂಡಿದೆ: ರಾಹುಲ್ ಗಾಂಧಿ

ಸಣ್ಣ ಪುಟ್ಟ ಕೆಲಸಗಳಿಗೂ ಬಿಜೆಪಿ ಸರ್ಕಾರ ದೊಡ್ಡ ಪ್ರಚಾರವನ್ನು ಪಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಎಎಪಿ ಹರಿಹಾಯ್ದಿದೆ.

Leave a Reply

Your email address will not be published.

Back to top button