ಲೂಸ್ ಮಾದ ಯೋಗಿಯ ಬದುಕು ಬದಲಿಸುವ ದುನಿಯಾ!

Public TV
2 Min Read
Yogi Duniya 1

ಬೆಂಗಳೂರು: ದಶಕದ ಹಿಂದೆ ತೆರೆಗೆ ಬಂದು ಬರೀ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ನೆರೆಯ ರಾಜ್ಯದವರೂ ಕರ್ನಾಟಕದತ್ತ ತಿರುಗಿನೋಡುವಂತೆ ಮಾಡಿದ ಸಿನಿಮಾ ದುನಿಯಾ. ಆ ಚಿತ್ರವನ್ನು ಸ್ವತಃ ಯೋಗಿ ಅವರ ತಂದೆ ಸಿದ್ದರಾಜು ನಿರ್ಮಿಸಿದ್ದರು. ದುನಿಯಾ ಸಿನಿಮಾ ಆದಾಗಿನ್ನೂ ಮೀಸೆ ಕೂಡಾ ನೆಟ್ಟಗೆ ಚಿಗುರದ ಯೋಗಿಗೆ ಲೂಸ್ ಮಾದ ಎಂಬ ಬಿರುದನ್ನು ನೀಡಿತ್ತು. ನಂತರ ಯೋಗಿ ನಾಯಕನಟನಾಗಿ ಕೂಡಾ ಎಂಟ್ರಿ ನೀಡಿ ಲೂಸ್ ಮಾದ ಎನ್ನುವ ಅದೇ ಹೆಸರಿನಿಂದ ಚಿತ್ರರಸಿಕರ ಮನೆಮಾತಾಗಿದ್ದು ಇತಿಹಾಸ. ಈಗ ಲೂಸ್ ಮಾದನ ಪಾಲಿಗೆ ‘ಯೋಗಿ ದುನಿಯಾ’ ಚಿತ್ರರಂಗದಲ್ಲಿ ಮರುಹುಟ್ಟು ನೀಡಿದೆ.

ಯೋಗಿಯನ್ನು ಜನ ನೋಡಲು ಇಷ್ಟ ಪಡುವುದು ಒಬ್ಬ ಸಾದಾ ಸೀದಾ ಹುಡುಗನ ಪಾತ್ರದಲ್ಲಿ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಯುವಕರ ಪ್ರತಿನಿಧಿಯನ್ನಾಗಿ ಯೋಗಿ ಸ್ಥಾನ ಗಿಟ್ಟಿಸಿರೋ ಕಾರಣದಿಂದಲೋ ಏನೋ `ಯೋಗಿ ದುನಿಯಾ’ ಅವರ ಪಾಲಿಗೆ ಹೆಚ್ಚು ಆಪ್ತವನ್ನಾಗಿಸಿದೆ.

Yogi Duniya 2

ಬೆಂಗಳೂರಿನ ಎಲ್ಲ ಪ್ಲಸ್ಸು ಮೈನಸ್ಸುಗಳನ್ನೂ ಬಾಚಿಕೊಂಡು ಕುಂತಂತೆ ಕಾಣುವ ಮೆಜೆಸ್ಟಿಕ್ ಏರಿಯಾದಲ್ಲೇ ನಡೆಯುವ ಘಟನೆಗಳು ಯೋಗಿ ದುನಿಯಾದ ಸರಕು. ಟ್ರಾವಲ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡಿಕೊಂಡು ಜೊತೆಗೆ ಕ್ರಿಕೆಟ್ ಬೆಟ್ಟಿಂಗನ್ನು ಉಪಕಸುಬಾಗಿಸಿಕೊಂಡ ಹುಡುಗ ಯೋಗಿ. ಇನ್ನು ಆ ಏರಿಯಾದಲ್ಲೇ ಓಡಾಡುತ್ತಾ ಗಿರಾಕಿಗಳಿಗಾಗಿ ಹಂಬಲಿಸುವ ಹುಡುಗಿ ಶೀಲಾ ಆಗಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ.

Yogi Duniya 3

ಬದುಕಿಗಾಗಿ ವೇಶ್ಯಾವೃತ್ತಿ ನಿಭಾಯಿಸುತ್ತಿದ್ದಾರೂ ಆಕೆಗೂ ಮನಸ್ಸಿದೆ, ಪ್ರೀತಿಗಾಗಿ ಪರಿತಪಿಸೋ ಹೃದಯವಿದೆ ಅನ್ನೋದನ್ನು ನಿರ್ದೇಶಕ ಹರಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ತಾನು ಜೀವಕ್ಕಿಂತಾ ಹೆಚ್ಚು ಪ್ರೀತಿಸುತ್ತಿರುವ ಹುಡುಗಿ ಇಂಥಾ ಕರಾಳ ದಂಧೆಯ ಭಾಗವಾಗಿದ್ದಾಳೆ ಅನ್ನೋ ಕಟುಸತ್ಯ ತಿಳಿದಾಗ ಹುಡುಗ ಅದನ್ನು ಯಾವ ರೀತಿ ಸ್ವೀಕರಿಸುತ್ತಾನೆ. ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಟ್ಟಿಂಗ್ ಮಾಫಿಯಾದ ಪಾಲುದಾರನಾದ ಹುಡುಗನ ಬದುಕು ಎಲ್ಲಿಗೆ ಮುಟ್ಟುತ್ತದೆ ಇಂಥ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಒಮ್ಮೆ ಯೋಗಿ ದುನಿಯಾವನ್ನು ನೋಡಲೇಬೇಕು.

ಬಹುತೇಕ ರಾತ್ರಿಹೊತ್ತಲ್ಲೇ ನಡೆಯುವ ಕಥೆ ಇದು. ಅದೂ ಮೆಜೆಸ್ಟಿಕ್ ಏರಿಯಾದಲ್ಲಿ ಜರುಗುವ ಕತೇ ಇದಾದ್ದರಿಂದ ಅದನ್ನು ತೆರೆ ಮೇಲೆ ಕಟ್ಟಿಕೊಡೋದು ಸುಲಭದ ಮಾತಲ್ಲ. ನಿರ್ದೇಶಕ ಹರಿ ಸೇರಿದಂತೆ ಛಾಯಾಗ್ರಾಹಕರು ಕೂಡಾ ಚಿತ್ರವನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಇನ್ನೊಂಚೂರು ಕಥೆಯಲ್ಲಿ ಸ್ಪೀಡು ಇದ್ದಿದ್ದರೆ ಮತ್ತಷ್ಟು ಚೆಂದ ಇರುತ್ತಿತ್ತು. ಯೋಗಿ, ಹಿತಾ ಅಭಿನಯವಂತೂ ತೀರಾ ನೈಜವಾಗಿ ಮೂಡಿಬಂದಿದೆ. ಬದುಕಿನ ಬೇರೆ ಕೋನಗಳನ್ನು ತೆರೆದಿಟ್ಟಿರುವ ಯೋಗಿ ದುನಿಯಾ ಸಿನಿಮಾ ಪ್ರೇಮಿಗಳ ಪಾಲಿಗೆ ಒಂದು ಕೊಡುಗೆಯಾಗಿದೆ.

Share This Article
1 Comment

Leave a Reply

Your email address will not be published. Required fields are marked *