Latest
ಹುತಾತ್ಮ ಯೋಧನ ಮನೆಗೆ ಸಿಎಂ ಆದಿತ್ಯನಾಥ್ ಭೇಟಿ- ಸೋಫಾ, ಎಸಿಯೂ ಬಂದ್ವು, ಹೋದ್ವು

ಶ್ರೀನಗರ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ದಾಳಿಗೆ ಹುತಾತ್ಮರಾದ ಯೋಧ ಪ್ರೇಮ್‍ಸಾಗರ್ ಅವರ ಮನೆಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ ವೇಳೆ ಅವರಿಗಾಗಿ ವಿಶೇಷ ವ್ಯವಸ್ಥೆಗಳನ್ನ ಮಾಡಲಾಗಿದ್ದು, ಇದರಿಂದ ನಮಗೆ ಅವಮಾನವಾಗಿದೆ ಅಂತ ಪ್ರೇಮ್ ಸಾಗರ್ ಕುಟುಂಬದವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರ ಪೈಶಾಚಿಕ ಕೃತ್ಯದಿಂದ ಶಿರಚ್ಛೇಧನಗೊಂಡಿದ್ದ ಯೋಧ ಪ್ರೇಮ್ ಸಾಗರ್ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ದಿಯೋರಿಯಾದ ಸಣ್ಣ ಗ್ರಾಮದಲ್ಲಿ ಸುಮಾರು 24 ಗಂಟೆಗಳಿಗೂ ಹೆಚ್ಚಿನ ಕಾಲ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡದೇ ಆಕ್ರೋಶ ವ್ಯಕ್ತಪಡಿಸಿದ್ರು. ಸಿಎಂ ಯೋಗಿ ಆದಿತ್ಯನಾಥ್ ಫೋನ್‍ನಲ್ಲಿ ಕುಟುಂಬದವರೊಂದಿಗೆ ಮಾತನಾಡಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿತ್ತು.
ಭಾನುವಾರದಂದು ಯೋಗಿ ಆದಿತ್ಯನಾಥ್ ದಿಯೋರಿಯಾದಲ್ಲಿರುವ ಪ್ರೇಮ್‍ಸಾಗರ್ ಅವರ ಮನೆಗೆ ಭೇಟಿ ನೀಡಿದ್ದರು. ಸಿಎಂ ಬರುವುದಕ್ಕೂ ಮೊದಲು ಮನೆಗೆ ಬಂದ ಅಧಿಕಾರಿಗಳು ಎಸಿ ಅಳವಡಿಸಿದ್ರು, ಸೋಫಾ ಹಾಕಿದ್ರು, ಕಾರ್ಪೆಟ್ ಹಾಕಿದ್ರು. ಯಾವುದೇ ಕಾರಣಕ್ಕೂ ಕರೆಂಟ್ ಕಟ್ ಆಗಬಾರದು ಅಂತಾ ಜನರೇಟರ್ ವ್ಯವಸ್ಥೆ ಮಾಡಿದ್ರು. ಅತ್ತ ಸಿಎಂ ಹೋಗ್ತಿದ್ದಂತೆ ಅಧಿಕಾರಿಗಳು ಮನೆಯಲ್ಲಿ ಅಳವಡಿಸಿದ್ದ ಎಸಿ, ಸೋಫಾ, ಕುರ್ಚಿ, ಜನರೇಟರ್ ಎಲ್ಲವನ್ನೂ ಎತ್ತಿಕೊಂಡು ಹೋದ್ರು ಅಂತ ಪ್ರೇಮ್ ಸಾಗರ್ ಅವರ ಪುತ್ರ ಈಶ್ವರ್ ಹೇಳಿದ್ದಾರೆ.
ಹುತಾತ್ಮ ಯೋಧ ಪ್ರೇಮ್‍ಸಾಗರ್ ಅವರ ಸಹೋದರ ಕೂಡ ಬಿಎಸ್‍ಎಫ್‍ನಲ್ಲಿ ಕೆಲಸ ಮಾಡುತ್ತಿದ್ದು, ಈ ಘಟನೆಯಿಂದ ನಮಗೆ ಅವಮಾನವಾಗಿದೆ ಎಂದಿದ್ದಾರೆ.
ಪ್ರೇಮ್ ಸಾಗರ್ ಅವರಿಗೆ 40 ಸಾವಿರ ರೂ. ಸಂಬಳ ಬರುತ್ತಿತ್ತು. ಪ್ರೇಮ್‍ಸಾಗರ್ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದರು. ಜೊತೆಗೆ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿಯಾಗಿದೆ.
ಮೇ 1ರಂದು ನಡೆದಿದ್ದ ಗುಂಡಿನ ಕಾಳಗದಲ್ಲಿ ಗಡಿ ಭದ್ರತಾ ಪಡೆಯ ಮುಖ್ಯ ಕಾನ್ಸ್ ಸ್ಟೇಬಲ್ ಆಗಿದ್ದ ಪ್ರೇಮ್ ಸಾಗರ್ ಹಾಗೂ ಯೋಧ ಪರಮ್‍ಜಿತ್ ಸಿಂಗ್ ವೀರಮರಣವನ್ನಪ್ಪಿದ್ದರು. ಪಾಕಿಸ್ತಾನದ ಯೋಧರು ಇವರ ಶಿರಚ್ಛೇದನ ಮಾಡಿ ವಿಕೃತಿ ಮೆರೆದಿದ್ದರು. ತನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪ್ರೇಮ್‍ಸಾಗರ್ ಅವರ ಪುತ್ರಿ ಹೇಳಿದ್ದರು.
