ಲಕ್ನೋ: ಉತ್ತರಪ್ರದೇಶದ ವಿಧಾನಸಭೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಸದನದೊಳಗೆ ಶಾಸಕರು ಮೊಬೈಲ್ ಫೋನ್ ತರದಂತೆ ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದ ವೇಳೆ ವಿರೋಧ ಪಕ್ಷದ ಶಾಸಕ ರಾಮ್ ಗೋವಿಂದ್ ಚೌಧರಿ ಎಂಬವರ ಕುರ್ಚಿಯ ಕೆಳಗೆ ಅನುಮಾನಾಸ್ಪದವಾದ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗಿನೊಳಗೆ 150 ಗ್ರಾಂ ಬಿಳಿ ಹುಡಿ ಇರೋದನ್ನು ಶ್ವಾನದಳ ಪತ್ತೆಹಚ್ಚಿತ್ತು.
ಸದ್ಯ ದೊರಕಿರುವ ಬಿಳಿ ಬಣ್ಣದ ಪುಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪುಡಿಯಿಂದ ಇಡೀ ಸದನಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ವಿಧಾನಸಭೆಯಲ್ಲಿ ಪಿಇಟಿಎನ್ ಸ್ಫೋಟಕ ವಸ್ತು ಪತ್ತೆಯಾಗಿದೆ. 500 ಗ್ರಾಂ ಪಿಇಟಿಎನ್ ಸಾಕು ಇಡೀ ವಿಧಾನಸಭೆಯನ್ನು ಸ್ಫೋಟಿಸಲು, ಅಂತಹ 150 ಗ್ರಾಂ ಪಿಇಟಿಎನ್ ವಿರೋಧ ಪಕ್ಷದ ನಾಯಕರೊಬ್ಬ ಕುರ್ಚಿಯ ಕೆಳಗೆ ದೊರಕಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತೀವ್ರಗೊಂಡಿದೆ ಎಂಬುದನ್ನು ಇದು ಸೂಚಿಸುತ್ತಿದೆ. ವಿಧಾನಸಭೆಯಲ್ಲಿರುವ ಪ್ರತಿಯೊಬ್ಬರು ಪೆÇಲೀಸರ ತನಿಖೆಗೊಳಪಡಬೇಕೆಂದು ಸಿಎಂ ಆದೇಶಿಸಿದ್ದಾರೆ.
ಘಟನೆಯಿಂದ ರಾಜ್ಯ ಭದ್ರತೆಯಲ್ಲಿ ರಾಜಿಯಾಗಿದೆ ಎಂಬುದನ್ನು ತೋರಿಸುತ್ತಿದೆ. ದೇಶದ ಅಥವಾ ರಾಜ್ಯದ ಭದ್ರತಾ ವಿಚಾರದಲ್ಲಿ ಯಾರೇ ಆದರೂ ರಾಜಿಯಾಗಬಾರದು ಅಂತ ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಬಜೆಟ್ ಮಂಡನೆ ಅಧಿವೇಶನದ ಅವಧಿಯಲ್ಲೇ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಉನ್ನತಾಧಿಕಾರಿಗಳ ಸಭೆ ಕರೆದಿರುವ ಸಿಎಂ ಯೋಗಿ ಆದಿತ್ಯನಾಥ್, ಎನ್‍ಐಎ ತನಿಖೆ ನಡೆಸಲು ಆದೇಶಿಸಿದ್ದಾರೆ.