ಲಕ್ನೋ: ಉತ್ತರಪ್ರದೇಶದದಲ್ಲಿ ಸರ್ಕಾರಿ ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದದೇ ಇದ್ದರೆ ಮುಂದೆ ಅವರ ಖಾತೆಗೆ ಸಂಬಳ ಜಮೆ ಮಾಡದೇ ಇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.
ಆಧಾರ್ ಕಡ್ಡಾಯಗೊಳಿಸುವ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಅನುಪಮ್ ಜೈಸ್ವಾಲ್ ಭಾನುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
Advertisement
ಪಾರದರ್ಶಕತೆಯನ್ನು ತರಲು ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಬೇಕು. ಅಷ್ಟೇ ಅಲ್ಲದೇ ಗುರುತಿನ ಪತ್ರವಾಗಿಯೂ ಆಧಾರ್ ಬಳಸಲು ಸರ್ಕಾರ ಮುಂದಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಪ್ರಸ್ತುತ ಪ್ರಾಥಮಿಕ ಶಾಲೆಯ ಮತ್ತು ಪ್ರೌಢ ಶಾಲೆಯ ಸೇರಿ ಒಟ್ಟು 4.95 ಲಕ್ಷ ಜನ ಶಿಕ್ಷಕರಿದ್ದಾರೆ. ಈಗಾಗಲೇ ಬಹಳಷ್ಟು ಶಿಕ್ಷಕರು ಆಧಾರ್ ಕಾರ್ಡ್ ಹೊಂದಿದ್ದಾರೆ. ಆಧಾರ್ ಕಾರ್ಡ್ ಹೊಂದಲು ಶಿಕ್ಷಕರಿಗೆ ಜುಲೈ ತಿಂಗಳ ಡೆಡ್‍ಲೈನ್ ನೀಡಲಾಗಿದ್ದು, ಈ ಡೆಡ್‍ಲೈನ್ ಒಳಗಡೆ ಆಧಾರ್ ಪಡೆಯದೇ ಇದ್ದರೆ ಮುಂದೆ ಸಂಬಳವನ್ನು ಖಾತೆಗೆ ಜಮೆ ಮಾಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.
Advertisement
ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಶಾಲೆಗಳಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲಾಗುವುದು. ಶಿಕ್ಷಕರ ಜೊತೆ 1 ರಿಂದ 7 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಆಧಾರ್ ಅನ್ನು ಕಡ್ಡಾಯವಾಗಿ ಹೊಂದಬೇಕು ಎಂದು ಸಚಿವ ಅನುಪಮ್ ಜೈಸ್ವಾಲ್ ತಿಳಿಸಿದ್ದಾರೆ.
Advertisement
ಈಗಾಗಲೇ ಶೇ.30 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಧಾರ್ ಹೊಂದಿದ್ದಾರೆ. ಆದರೆ ದೂರದಪ್ರದೇಶದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಿಲ್ಲ. ಕೆಲ ಶಾಲೆಗಳಲ್ಲಿ ನಕಲಿ ಟೀಚರ್ ಗಳಿದ್ದು, ಈ ಸಮಸ್ಯೆ ಆಧಾರ್‍ನಿಂದ ಪರಿಹಾರವಾಗಲಾರದು ಎಂದು ಅಧಿಕಾರಿ ತಿಳಿಸಿದ್ದಾರೆ.
ಜುಲೈ ಒಂದರಿಂದ ಐಟಿ ರಿಟರ್ನ್ ಮತ್ತು ಪ್ಯಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟವಾದ ಬಳಿಕ ಯೋಗಿ ಸರ್ಕಾರ ಶಿಕ್ಷಕರಿಗೆ ಆಧಾರ್ ಕಡ್ಡಾಯ ಮಾಡಿದೆ.
ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್