ಲಕ್ನೋ: ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಂಡು ನಿಶ್ಚಿಂತೆಯಾಗಿ ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಸರ್ಕಾರಿ ನೌಕರರಿಗೆ ಸಿಎಂ ಯೋಗಿ ಆದಿತ್ಯನಾಥ್ ಬಹುದೊಡ್ಡ ಶಾಕ್ ನೀಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್‍ರವರು `ಕಡ್ಡಾಯ ನಿವೃತ್ತಿ ಘೋಷಣೆ’ ಆದೇಶವನ್ನು ಜಾರಿಗೊಳಿಸಿದ್ದು, ಈ ಸಂಬಂಧ 50 ವರ್ಷ ದಾಟಿದ ಮತ್ತು ಕಾರ್ಯದಕ್ಷತೆ ತೋರದ ನೌಕರರಿಗೆ ಬಲವಂತದ ನಿವೃತ್ತಿ ನೀಡಲು ಮುಂದಾಗಿದೆ. ಅಲ್ಲದೇ ರಾಜ್ಯದ ಒಟ್ಟು 16 ಲಕ್ಷ ನೌಕರರ ಪೈಕಿ 4 ಲಕ್ಷಕ್ಕೂ ಅಧಿಕ ನೌಕರರ ವೃತ್ತಿ ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತಿದ್ದು, ಈ ಸಂಬಂಧ ಜುಲೈ 31ರ ಒಳಗಾಗಿ ಅಂತಿಮ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಕುಲ್ ಸಿಂಘಾಲ್ ರವರು, ಮಾರ್ಚ್ 31, 2018ಕ್ಕೆ 50 ವರ್ಷ ತುಂಬಿದ ನೌಕರರನ್ನು `ಕಾರ್ಯಕ್ಷಮತೆ ಪರೀಕ್ಷೆ’ಗೆ ಒಳಪಡಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಮ್ಮ ಸರ್ಕಾರದಲ್ಲಿ ಭ್ರಷ್ಟ ಹಾಗೂ ಬೇಜವಬ್ದಾರಿಯುತ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇರುವಂತಿಲ್ಲ. ನೌಕರರು ಕಡ್ಡಾಯವಾಗಿ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು, ಸಾರ್ವಜನಿಕರ ಸೇವೆಯಲ್ಲಿ ಯಾವುದೇ ಲೋಪ-ದೋಷ ಕಂಡುಬರಬಾರದು ಹೀಗಾಗಿ ಕಡ್ಡಾಯ ನಿವೃತ್ತಿ ಘೋಷಣೆಗೆ ಆದೇಶ ನೀಡಿದ್ದೇವೆ ಎಂದು ಹೇಳಿದ್ದಾರೆ.
ಯೋಗಿ ಸರ್ಕಾರದ ನಡೆಯನ್ನು ಖಂಡಿಸಿರುವ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಯಾದವೇಂದ್ರ ಮಿಶ್ರಾರವರು, “ಇದು ನೌಕರರಿಗೆ ಕಿರುಕುಳ ನೀಡುವ ಕ್ರಮವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಸರ್ಕಾರದ ಈ ಕ್ರಮದ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆದಿದ್ದೇವೆ. ಸಭೆಯಲ್ಲಿ ಮುಷ್ಕರ, ಪ್ರತಿಭಟನೆ ಸೇರಿದಂತೆ ಹೋರಾಟದ ಹಾದಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.