CinemaKarnatakaLatestMain PostSandalwood

‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

Advertisements

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿ ಅಭಿನಯಿಸಿರುವ, ರಮೇಶ್ ರೆಡ್ಡಿ ಅವರ ನಿರ್ಮಾಣದ “ಗಾಳಿಪಟ 2” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ವಿತರಕರಾದ ವೆಂಕಟ್(ಕೆ.ವಿ.ಎನ್), ಸುಪ್ರೀತ್, ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನಟ ಶ್ರೇಯಸ್ ಕೆ. ಮಂಜು ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.

“ಗಾಳಿಪಟ ೨” ಚಿತ್ರದ ಟ್ರೇಲರನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿದರು. ಟ್ರೇಲರ್ ಸಖತಾಗಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ ಮತ್ತೊಮ್ಮೆ ಮೋಡಿ ಮಾಡಲಿದೆ. ದಿಗಂತ್, ಪವನ್ ಹಾಗೂ ನಾಯಕಿಯರು ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಪವನ್ ತುಂಬಾ ಕ್ಯೂಟಾಗಿ ಕಾಣುತ್ತಾರೆ. ಅರ್ಜುನ್ ಜನ್ಯ ಸಂಗೀತ ಸೊಗಸಾಗಿದೆ. ನನಗೆ ಅವರನ್ನು ನೋಡಿದಾಗ ಎ.ಆರ್.ರೆಹಮಾನ್ ನೆನಪಾಗುತ್ತಾರೆ.‌ ಮುಂದೆ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ “45” ಚಿತ್ರದ ನಾಯಕನಾಗಿ ನಾನು ನಟಿಸುತ್ತಿದ್ದೇನೆ. ರಮೇಶ್ ರೆಡ್ಡಿ ಅವರೆ ಆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. “ಗಾಳಿಪಟ ೨” ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು ಶಿವರಾಜಕುಮಾರ್. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

ಈ ಚಿತ್ರದ ಸಂಭಾಷಣೆಯೊಂದರಂತೆ ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಇದಾಗಲಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ “ಗಾಳಿಪಟ” ಯಶಸ್ಸು ಕಂಡಿತ್ತು. “ಗಾಳಿಪಟ 2” ಸಹ ಹಾಡುಗಳ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಭರ್ಜರಿ ಗೆಲವು ಕಾಣಲಿದೆ ಎಂದು ರಮೇಶ್ ಅರವಿಂದ್ ಹಾರೈಸಿದರು. ಎಲ್ಲರೂ ಮಾತನಾಡಿದ್ದಾರೆ. ನಾನು ಇನೇನು ಹೇಳುವುದಿದೆ. ಯೋಗರಾಜ್ ಭಟ್ಟರು ನಿರ್ದೇಶಕರಾಗಿ, ಗೀತರಚನೆಕಾರರಾಗಿ ಹಾಗೂ ಸಂಭಾಷಣೆಕಾರರಾಗೂ ಜನಪ್ರಿಯ. ಅದಕ್ಕೆ ಈ ಚಿತ್ರದ ಟ್ರೇಲರ್ ಸಾಕ್ಷಿ. ಒಳ್ಳೆಯ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರಚಂಡ ಯಶಸ್ಸು ಕಾಣಲಿ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ನನ್ನ ಹಾಗೂ ಭಟ್ಟರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಾನು ಯಾವತ್ತು ಯಾವ ಚಿತ್ರದ ಕುರಿತು  ಅವರಿಗೆ ಫೋನ್ ಮಾಡಿರಲಿಲ್ಲ. ಆದರೆ ಈ ಚಿತ್ರದ ಡಬ್ಬಿಂಗ್ ಆದ ಮೇಲೆ ಫೋನ್ ಮಾಡಿ ಅದ್ಭುತ ಚಿತ್ರ ಮಾಡಿದ್ದೀರಾ ಅಂತ ಹೇಳಿ ಅಭಿನಂದನೆಗಳನ್ನು ತಿಳಿಸಿದೆ. ನಿಜಕ್ಕೂ “ಗಾಳಿಪಟ 2” ತುಂಬಾ ಚೆನ್ನಾಗಿದೆ. ನೀವೆಲ್ಲಾ ನೋಡಿ ಹಾರೈಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್. ರೋಡಿನಲ್ಲಿ ಸಿಗುವ ಸಂಬಂಧ, ರಕ್ತ ಸಂಬಂಧಕ್ಕಿಂತ ಹೆಚ್ಚು ಎಂದು ನಂಬಿರುವವನು ನಾನು. ಆ ಸ್ನೇಹದಿಂದಲೇ ಹದಿನಾಲ್ಕು ವರ್ಷಗಳ ಹಿಂದೆ “ಗಾಳಿಪಟ” ಚಿತ್ರ ನಿರ್ಮಾಣವಾಯಿತು. ಈಗ “ಗಾಳಿಪಟ ೨'” ಸಹ ಅದೇ ಸ್ನೇಹದಿಂದ ನಿರ್ಮಾಣವಾಗಿದೆ. ಕರ್ನಾಟಕದ ಎಲ್ಲಾ ಸ್ನೇಹಿತರು ಆಗಸ್ಟ್‌ 12ರಂದು ಬಿಡುಗಡೆಯಾಗುತ್ತಿರುವ ನಮ್ಮ “ಗಾಳಿಪಟ ೨” ಚಿತ್ರವನ್ನು ನೋಡಿ ಗೆಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು ನಿರ್ದೇಶಕ ಯೋಗರಾಜ್ ಭಟ್.

ಯೋಗರಾಜ್ ಭಟ್ ಒಳ್ಳೆಯ ಚಿತ್ರ  ಮಾಡಿ ಕೊಟ್ಟಿದ್ದಾರೆ. ಈ ಚಿತ್ರ ಇಷ್ಟು ಚೆನ್ನಾಗಿ ಬರಲು ಚಿತ್ರತಂಡ ತುಂಬಾ ಶ್ರಮಪಟ್ಟಿದೆ. ಎಲ್ಲರಿಗೂ ನನ್ನ ಧನ್ಯವಾದ. ನಮ್ಮ ಸಮಾರಂಭಕ್ಕೆ ಶಿವಣ್ಣ, ಉಪೇಂದ್ರ ಹಾಗೂ ರಮೇಶ್ ಸರ್ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇವರನೆಲ್ಲಾ ನೋಡಿ ನಾನು “ಗಾಳಿಪಟ ೨” ಚಿತ್ರವನ್ನು ಮರೆತು ಬಿಟ್ಟಿದೆ.  ‌ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ಚಿತ್ರದಲ್ಲಿ ಅಭಿನಯಿಸಿರುವ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ, ವೈಭವಿ, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‌ಅರ್ಜುನ್ ಜನ್ಯ ಸಂಗೀತದ ಬಗ್ಗೆ , ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಕುರಿತು ಹಾಗೂ ಧನು ಮಾಸ್ಟರ್ ನೃತ್ಯ ನಿರ್ದೇಶನದ ವಿವರಣೆ ನೀಡಿದರು.

Live Tv

Leave a Reply

Your email address will not be published.

Back to top button