ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ (Raju Talikote) ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಕಂಬನಿ ಮಿಡಿದಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಮಸ್ತೆ, ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬಾ ಪ್ರೀತಿ, ತುಂಬಾ ಖುಷಿ, ತುಂಬಾ ನೆನಪು. ನೀವೊಬ್ಬ ನಾಡುಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ, ಇದು ಸಾವಲ್ಲ ನಿಮ್ಮ ಹುಟ್ಟು. ನಮನ + ಧನ್ಯವಾದ ರಾಜಣ್ಣ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ನಿಧನ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ (Raju Talikote) ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ರಾಜು ತಾಳಿಕೋಟೆ ಕುಸಿದು ಬಿದ್ದಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೆಲ ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು (ಅ.13) ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.
ಅನಾರೋಗ್ಯ ಕಾರಣದಿಂದಾಗಿ ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ರಾಜು ತಾಳಿಕೋಟೆಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ನಂತರ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.ಇದನ್ನೂ ಓದಿ: ಕುಟುಂಬಕ್ಕಾಗಿ ಬೆಂಗಳೂರಿನ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ – ಈಗ ಉಬರ್ ಚಾಲಕ, ಹೆಚ್ಚು ಸಂಪಾದನೆ