– ಚುನಾವಣಾ ಗೀತೆಯ ಚಿತ್ರೀಕರಣದಲ್ಲಿ ಯೋಗರಾಜ್ ಭಟ್ ಮತ್ತು ತಂಡ ಬ್ಯುಸಿ
ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವಂತೆ ಮಾಡಲು ಮತ್ತು ಮತದಾರರನ್ನು ಜಾಗೃತಿಗೊಳಿಸುವ ಸಲುವಾಗಿ ಚುನಾವಣಾ ಆಯೋಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಹಳ ಸುಲಭವಾಗಿ ಸಾಮಾನ್ಯ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಯೋಗರಾಜ್ ಭಟ್ಟರ ಗೀತೆಯ ಮೊರೆ ಹೋಗಿದೆ.
ಹೌದು. ಕನ್ನಡದ ಚಿತ್ರರಂಗದ ಜನಪ್ರಿಯ ನಿರ್ದೇಶಕ, ತಮ್ಮ ಸಾಲುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಬಲ್ಲ ಪ್ರಸಿದ್ಧ ಗೀತ ಸಾಹಿತಿ ಯೋಗರಾಜ್ ಭಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಹೊಸ ಹಾಡೊಂದನ್ನು ರಚಿಸಿದ್ದಾರೆ. ಈ ಮೂಲಕ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ.
Advertisement
Advertisement
ಯೋಗರಾಜ್ ಭಟ್ ಬರೆದ ಈ ಚುನಾವಣಾ ಗೀತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಇತರ ಗಾಯಕರು ಹಾಡಲಿದ್ದಾರೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂ, ವಿಧಾನಸೌಧ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ ಹೀಗೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸುವ ನೂರಾರು ಸಾಂಸ್ಕೃತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
Advertisement
Advertisement
ಇನ್ನು ಈ ಚುನಾವಣಾ ಗೀತೆಯ ಬಗ್ಗೆ ಮಾತನಾಡಿರುವ ಯೋಗರಾಜ್ ಭಟ್, `ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರ ಪ್ರಯತ್ನದಿಂದ ಈ ಗೀತೆ ಮೂಡಿಬರುತ್ತಿದೆ. ಇದರ ಹಿಂದಿನ ಕೀರ್ತಿ ಅವರಿಗೆ ಸಲ್ಲಬೇಕು. ಅವರು ಈ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿಸಿದ್ದರಿಂದ ನಾವು ಮಾಡಲು ಮುಂದಾದೆವು. ಇದರ ಚಿತ್ರೀಕರಣಕ್ಕೆ ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಪ್ರಾಜೆಕ್ಟ್ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ’ ಎಂದರು.
ಈ ಗೀತೆಯ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ ಎಂದರು.
ಒಟ್ಟಾರೆ ಯೋಗರಾಜ್ ಭಟ್ಟರ ಈ ಚುನಾವಣಾ ಗೀತೆಯಲ್ಲಿ ಹೊಸ ಥರದ ಧಮ್, ರಿದಮ್ ಎರಡೂ ಇದ್ದು ಭಟ್ಟರ ಇತರೆ ಗೀತೆಗಳಂತೆ ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಈ ಚುನಾವಣಾ ಗೀತೆ ಮತದಾರರ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.