Connect with us

Districts

ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

Published

on

ಹಾವೇರಿ: ಯೋಗವು ಭಾರತೀಯ ಪರಂಪರೆಯ ತಾಯಿ ಬೇರಾಗಿದ್ದು, ಭಾರತವು ವಿಶ್ವಕ್ಕೆ ನೀಡಿದ ಅತೀ ಪ್ರಮುಖ ಕೊಡುಗೆ. ಯೋಗವು ನಮ್ಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿ ಮಠ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಯೋಗಾಸನ ಚಾಂಪಿಯನ್‍ಶಿಫ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸದಾಶಿವ ಸ್ವಾಮೀಜಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.

ಪ್ರಾಚೀನ ಕಾಲದಲ್ಲಿ ಸಂತ ಮಹಾತ್ಮರು ಆರಂಭಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದೆ. ಯಾವುದೇ ವಯೋಮಾನದವರು ಕೂಡಾ ಯೋಗವನ್ನು ಮಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಬಹುದು ಎಂದು ಸ್ವಾಮೀಜಿ ಹೇಳಿದರು.

ಎಲ್ಲ ಭಾಗ್ಯಗಳಿಗಿಂತ ಆರೋಗ್ಯದ ಭಾಗ್ಯವೇ ದೊಡ್ಡದು ಎನ್ನುವಂತೆ ಹಿತ ಮಿತವಾದ ಊಟ, ಚಟುವಟಿಕೆಯುಕ್ತ ಜೀವನ ಹಾಗೂ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಅಳವಡಿಸಿಕೊಳ್ಳಬೇಕು. ಆಗ ರೋಗ ಮುಕ್ತ ಬದುಕನ್ನು ಹಾಗೂ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂದು ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತ ಯೋಗ ಫೆಡರೇಶನ್‍ನ ಉಪಾಧ್ಯಕ್ಷ ಗಂಗಾಧರಪ್ಪ ಅವರು ಮಾತನಾಡಿ, ಇಂದು ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಿದ್ದು, ಯೋಗ ಅಂತರಾಷ್ಟ್ರೀಯ ಸ್ಪರ್ಧೆಯಾಗಿ ಮಾರ್ಪಾಡಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ ಒಲಿಂಪಿಕ್ಸ್ ನಲ್ಲಿ ಯೋಗವನ್ನು ಸೇರ್ಪಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ಯೋಗ ಚಾಂಪಿಯನ್‍ಶಿಪ್‍ನಲ್ಲಿ 30 ಜಿಲ್ಲೆಗಳಿಂದ ಒಟ್ಟು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟನ ಶಶಿಕಾಂತ ಜೈನ್ ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಟಿ, ವೀರಣ್ಣ ಅಂಗಡಿ, ಎಂ.ಸಿ ಮಳಿಮಠ, ಬಿ. ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು. ಯೋಗ ಸಂಯೋಜಕರಾದ ಪ್ರೇಮಕುಮಾರ ಮುದ್ದಿ ಕಾರ್ಯಕ್ರಮ ನಿರ್ವಹಿಸಿದರು.

Click to comment

Leave a Reply

Your email address will not be published. Required fields are marked *