– ಅತ್ಯಾಚಾರದ ವೀಡಿಯೊ ಮಾಡಿದ್ದ ನೀಚ!
ನವದೆಹಲಿ: ಮಹಿಳೆಯೊಬ್ಬಳಿಗೆ ವಿದೇಶದಲ್ಲಿ ನೆಲೆಸಲು ಸಹಕರಿಸೋ ಆಮಿಷವೊಡ್ಡಿ, ಅತ್ಯಾಚಾರವೆಸಗಿದ್ದ (Rape Case) ಪಂಜಾಬ್‌ನ ಪಾದ್ರಿ ಬಜೀಂದರ್ ಸಿಂಗ್‌ಗೆ (42) (Bajinder Singh) ಮೊಹಾಲಿಯ ನ್ಯಾಯಾಲಯವು (Court) ಜೀವಾವಧಿ ಶಿಕ್ಷೆ ವಿಧಿಸಿದೆ.
2018 ರಲ್ಲಿ ಜಿರಾಕ್‌ಪುರ ಪೊಲೀಸ್ ಠಾಣೆಯಲ್ಲಿ 22 ವರ್ಷದ ಮಹಿಳೆಯೊಬ್ಬರು ನೀಡಿದ್ದ ದೂರಿನಡಿ ಸ್ವಯಂ ಘೋಷಿತ ಧರ್ಮೋಪದೇಶಕ ಪಾದ್ರಿ ಬಜೀಂದರ್ ಸಿಂಗ್ ಅಲಿಯಾಸ್ ಯೇಶು ಯೇಶು ಪ್ರವಾದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತನನ್ನು ಬಂಧಿಸಿ, ಪಟಿಯಾಲ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಇತರ ಐದು ಆರೋಪಿಗಳಾದ ಅಖ್ಬರ್ ಭಟ್ಟಿ, ರಾಜೇಶ್ ಚೌಧರಿ, ಜತಿಂದರ್ ಕುಮಾರ್, ಸಿತಾರ್ ಅಲಿ ಮತ್ತು ಸಂದೀಪ್ ಪೆಹ್ಲ್ವಾನ್ ಅವರನ್ನು ಖುಲಾಸೆಗೊಳಿಸಲಾಗಿದೆ.
ಬಜೀಂದರ್ ಸಿಂಗ್ ವಿದೇಶಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿ, ಅತ್ಯಾಚಾರ ಎಸಗಿದ್ದಾನೆ. ಮೊಹಾಲಿಯದ ಸೆಕ್ಟರ್ 63ರಲ್ಲಿರುವ ನಿವಾಸದಲ್ಲಿ ಅತ್ಯಾಚಾರ ಮಾಡಿ, ಅದರ ವೀಡಿಯೊ ಮಾಡಿದ್ದಾನೆ. ತನ್ನ ಬೇಡಿಕೆಗಳಿಗೆ ಒಪ್ಪದಿದ್ದರೆ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಳು.
2012ರಲ್ಲಿ ಬಜೀಂದರ್ ಸಿಂಗ್ ಧರ್ಮೋಪದೇಶಕ ಎಂದು ಘೋಷಿಸಿಕೊಂಡಿದ್ದ. ಅವನ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆತ ಪವಾಡಗಳ ಮೂಲಕ ಕಾಯಿಲೆಗಳನ್ನು ಗುಣಪಡಿಸುತ್ತಾನೆ ಎಂದು ಹಲವರು ನಂಬಿದ್ದರು. ಆತ ಜಲಂಧರ್‌ನ ತಾಜ್‌ಪುರದಲ್ಲಿ ಚರ್ಚ್ ಆಫ್ ಗ್ಲೋರಿ ಅಂಡ್ ವಿಸ್ಡಮ್ ಮತ್ತು ಮೊಹಾಲಿಯ ಮಜ್ರಿಯಲ್ಲಿ ಮತ್ತೊಂದು ಚರ್ಚ್‌ನ್ನು ನಡೆಸುತ್ತಾನೆ. ವಿದೇಶಗಳಲ್ಲಿಯೂ ಆತ ಅನೇಕ ಶಾಖೆಗಳನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ.
ಬಜೀಂದರ್ ಸಿಂಗ್‌ನ ಸಭೆಗಳನ್ನು ನೇರ ಪ್ರಸಾರ ಮಾಡುವ “ಪ್ರವಾದಿ ಬಜಿಂದರ್ ಸಿಂಗ್” ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ, 3.74 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರರಿದ್ದಾರೆ.