ಬೆಂಗಳೂರು: ಮೀಟೂ ಆರೋಪದ ಬಳಿಕ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿವೆ. ಹಾಗಾಂತ ಮೀಟೂ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಸರವಿಲ್ಲ. ನಾನು ಮಾತನಾಡಿದ್ದು ತಪ್ಪು ಅಂತಾನೂ ಅನಿಸಿಲ್ಲ. ಎಲ್ಲವನ್ನೂ ಕಾಲ ನಿರ್ಣಯಿಸುತ್ತೆ ಅಂತ ನಟಿ ಶೃತಿ ಹರಿಹರನ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ತಮ್ಮ ಹೊಸ ಚಿತ್ರ ನಾತಿಚರಾಮಿ ಕುರಿತು ಸುದ್ದಿಗೋಷ್ಠಿ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೆಚ್ಚು ಕೆಲಸ ಮಾಡಬೇಕೋ ಬೇಡವೋ ಅನ್ನೋದನ್ನು ಕಾಲ ನಿಗದಿ ಮಾಡುತ್ತೆ. ಚಿತ್ರದಲ್ಲಿ ನಟಿಸುವ ಅವಕಾಶಗಳು ಕಮ್ಮಿಯಾಗಿರಬಹು. ಆದ್ರೆ ಅದನ್ನು ಕಾಲ ಹೇಳುತ್ತೆ. ನಾವು ಎಲ್ಲವನ್ನೂ ಮಾಡೋದು ಜನರಿಗೋಸ್ಕರ ಅಲ್ವ. ಹೀಗಾಗಿ ಜನ ಅದನ್ನು ನಿರ್ಧರಿಸಬೇಕು ಅಂದ್ರು.
ನಟ ಅರ್ಜುನಾ ಸರ್ಜಾ ಮೇಲೆ ಮಾಡಿರುವ ಮೀಟೂ ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಸದ್ಯದಲ್ಲಿ ಈ ಕುರಿತು ಪ್ರೆಸ್ ಮೀಟ್ ಮಾಡೋದಾಗಿ ತಿಳಿಸಿದ್ರು.
ನಾತಿಚರಾಮಿ ಚಿತ್ರದ ಬಗ್ಗೆ:
ಈ ಸಿನಿಮಾವನ್ನು ತುಂಬಾನೇ ಇಷ್ಟಪಟ್ಟು ಮಾಡಿದ್ದೇವೆ. ಈ ಶುಕ್ರವಾರ ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭಯ ಸಾಮಾನ್ಯವಾಗಿ ಇರುತ್ತದೆ. ಆದ್ರೆ ಈ ಬಾರಿ ಸ್ವಲ್ಪ ಜಾಸ್ತಿನೇ ಭಯ ಇದೆ. ಯಾಕಂದ್ರೆ ಇದೊಂದು ಎಕ್ಸ್ಟ್ರಾ ಸೆನ್ಸಿಸಿಟಿವ್ ವಿಷಯ ಚಿತ್ರವಾಗಿದೆ. ಜನರಲ್ ಆಗಿ ಒಂದು ಸಿನಿಮಾದಲ್ಲಿ ನಾವು ಪ್ರೀತಿ, ತಂದೆ-ತಾಯಿ ಅಥವಾ ತಂದೆ-ಮಗಳ ಮಧ್ಯೆ ಇರುವ ಸಮಸ್ಯೆಗಳನ್ನು ಹೇಳುತ್ತೇವೆ. ಆದ್ರೆ ಇಲ್ಲಿ ಈ ವಿಷಯಗಳಲ್ಲದೇ ಮದುವೆ ಅಂದ್ರೆ ಏನು ಅನ್ನೋ ಪ್ರಶ್ನೆ ಕೇಳುವ ಸಿನಿಮಾವಾಗಿದೆ ಅಂದ್ರು.
ಮೈಂಡ್ ಲೆಸ್ ಎಂಟರ್ ಟೈನ್ ಮೆಂಟ್ ಸಿನಿಮಾ ಅಲ್ಲ. ಆದ್ರೆ ಚಿತ್ರದಲ್ಲಿ ಮನರಂಜನೆ ಇದೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಎಂಟರ್ ಟೈನ್ ಮೆಂಟ್, ನಗು, ಅಳು ಹಾಗೂ ಮ್ಯೂಸಿಕ್ ಎಲ್ಲವೂ ಸೇರಿಕೊಂಡಿದೆ. ಈ ಚಿತ್ರ ಗೌರಿ, ಸುರೇಶ್ ಹಾಗೂ ಸುಮಾ ಎಂಬ ಮೂವರ ಜರ್ನಿ ಮಧ್ಯೆ ಒಂದು ಸೊಗಸಾದ ಕಥೆಯನ್ನು ಸಂಧ್ಯಾರಾಣಿ ಮೇಡಂ ಬರೆದಿದ್ದಾರೆ. ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಾನು ಗೌರಿ-ಮಹೇಶ್ ಅನ್ನೋ ಪಾತ್ರ ನಿರ್ವಹಿಸಿದ್ದೇನೆ ಅಂದ್ರು. ಇದನ್ನೂ ಓದಿ: ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!
ಮದುವೆಯಾದ ಆಧುನಿಕ ಮಹಿಳೆಯ ಗಂಡ ಏಕಾಏಕಿ ತೀರಿಕೊಂಡ ನಂತರ ಮದುವೆ ಅನ್ನೋ ಒಂದು ಪದಕ್ಕೆ ಏನು ಅರ್ಥ ಅನ್ನೋ ಹುಡುಕಾಟದಲ್ಲಿ ಇರುವಂತಹ ಒಂದು ಪಾತ್ರವಾಗಿದೆ. ಸಾಮಾನ್ಯವಾಗಿ 1 ತಿಂಗಳು ಇರುವ ಶೂಟಿಂಗ್ ಅನ್ನು ನಾವು 15 ದಿನದಲ್ಲಿ ಮುಗಿಸಿದ್ದೇವೆ. ಹಗಲು-ರಾತ್ರಿ ಕೆಲಸ ಮಾಡಿ ಒಂದು ಸಿನಿಮಾವನ್ನು ಮಾಡಿದ್ದೇವೆ ಅಂತ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ಅವರು, ಸಿನಿಮಾ ನೋಡಿ ಪ್ರೋತ್ಸಾಹಿಸಿ ಅಂತ ಮನವಿ ಮಾಡಿಕೊಂಡರು.
ಚಿಕ್ಕವಯಸ್ಸಲ್ಲೇ ತಂದೆಯನ್ನ ಕಳೆದುಕೊಂಡೆ:
ನನ್ನ ತಂದೆಯನ್ನು ನಾನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡಿದ್ದೇನೆ. ನನ್ನ ತಾಯಿ ಈ ಸಮಾಜವನ್ನು ಎದುರಿಸಿಕೊಂಡು 2 ಮಕ್ಕಳನ್ನು ಬೆಳೆಸಿದ್ದಾರೆ. ಹೀಗಾಗಿ ಈ ಒಂದು ಕಥೆ ಬಂದ ತಕ್ಷಣವೇ ಯಾಕೋ ಗೌರಿ(ನನ್ನ ಪಾತ್ರ)ನಲ್ಲಿ ನನ್ನ ತಾಯಿಯನ್ನು ಕಂಡೆ. ಒಂದು ಹೆಣ್ಣಾಗಿ ನಾವು ಆಚೆ ಮಾತನಾಡದೇ ಇರೋವಂತಹ ಹಲವಾರು ವಿಷಯಗಳು ನಮ್ಮ ಮನಸ್ಸಲ್ಲೇ ಇವೆ. ಚಿತ್ರದಲ್ಲಿ ಗೌರಿಯೂ ಹಾಗೆ. ಅವಳ ಮನಸ್ಸಲ್ಲಿರುವಂತಹ ಅಷ್ಟೊಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಸಿನಿಮಾ ಸಾಲಲ್ಲ. 2, 3 ನಾತಿಚರಾಮಿ ಸಿನಿಮಾ ಮಾಡಿದ್ರೂ ಗೌರಿಯ ಎಲ್ಲಾ ಕಥೆಗಳನ್ನು ಹೇಳಿಕೊಳ್ಳಲು ಸಾಧ್ಯನಾ ಎಂದು ನನಗೆ ಗೊತ್ತಿಲ್ಲ. ಹಾಗಾಗಿ ಅವಳ ಗುಂಗಿನಲ್ಲೇ ಬದುಕುತ್ತಾ ಇದ್ದೀನಿ ಅಂದ್ರು.
ನನ್ನ ಮನಸ್ಸಿನ ಒಳಗಡೆ ಇರುವ ಕೆಲವೊಂದು ವಿಚಾರಗಳನ್ನು ಹೊರಗೆ ತರಲು ನಾತಿಚರಾಮಿ ಒಂದು ಔಟ್ ಲೆಟ್ ಆಗಿದೆ. ಇನ್ನು ಮಂದೆ ನಾನು ಸಿನಿಮಾ ಮಾಡಿದ್ರೆ ಅಥವಾ ನಿರ್ದೇಶಿಸಿದ್ರೆ ಖಂಡಿತಾ ತನ್ನ ಮನಸ್ಸಿನ ಒಳಗಡೆ ಇರುವಂತಹ ಗೊಂದಲಗಳನ್ನು ಹಂಚಿಕೊಳ್ಳುವುದೇ ಆಗಿರುತ್ತದೆ. ನಿರ್ದೇಶನ ಮಾಡುವ ಆಸೆ ಇದೆ. ಸಂದರ್ಭ ಬಂದ್ರೆ ಖಂಡಿತಾ ಮಾಡುವುದಾಗಿ ಹೇಳಿದ್ರು.
ಎಷ್ಟು ಸಿನಿಮಾ ಬಾಕಿದೆ? ಎಷ್ಟು ಸಿನಿಮಾದಲ್ಲಿ ಬ್ಯುಸಿ ಇದ್ದೀರಿ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸಿನಿಮಾ ಯಾವುದಕ್ಕೂ ನಾನು ಸಹಿ ಮಾಡಿಲ್ಲ. `ಆದ್ಯ’ ಅನ್ನೋ ಒಂದು ಸಿನಿಮಾ ಇದೆ. ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿರಂಜೀವಿ ಸರ್ಜಾ ಹಾಗೂ ಸಂಗೀತಾ ಭಟ್ ಕೂಡ ಅಭಿನಯಿಸಿದ್ದಾರೆ. ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ಮಂಜು ಸರ್ ಅವರು ನಿರ್ದೇಶಿಸಿರುವ ಒಂದು ಹಾರರ್ ಸಿನಿಮಾ ಕೂಡ ಇದೆ ಅಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv