ಬೆಂಗಳೂರು: ಇಂದು ಹಾಗೂ ನಾಳೆ ಎಂದರೆ ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಸಹ ಘೋಷಿಸಲಾಗಿದೆ. ಇದನ್ನೂ ಓದಿ: 2 ದಿನದಲ್ಲಿ ಕರಾವಳಿಗೆ ಅಪ್ಪಳಿಸಲಿದೆ ‘ಮಹಾ’ ಚಂಡಮಾರುತ
ಲಕ್ಷದ್ವೀಪ ಬಳಿಯ ಅರಬ್ಬಿ ಸಾಗರದಲ್ಲಿ ವಾಯುಭಾರ ಕುಸಿತದಿಂದ ಮಹಾ ಚಂಡಮಾರುತ ಎದ್ದಿದ್ದು, ಇಂದು ಮಧ್ಯಾಹ್ನ ಲಕ್ಷದ್ವೀಪ ತೀರಕ್ಕೆ ಅಪ್ಪಳಿಸಲಿದೆ. ಸದ್ಯ ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಿಂದ ಆಗ್ನೇಯ ದಿಕ್ಕಿನ 240 ಕಿ.ಮೀ ದೂರದಲ್ಲಿ ಮಹಾ ಚಂಡಮಾರುತ ಕೇಂದ್ರೀಕೃತವಾಗಿದೆ.
ಈಗಾಗಲೇ ಗಂಟೆಗೆ 90ರಿಂದ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, 2 ಮೀ. ಎತ್ತರದವರೆಗೂ ರಕ್ಕಸ ಅಲೆಗಳು ಏಳುತ್ತಿವೆ. ಈಗಾಗಲೇ ಲಕ್ಷದ್ವೀಪ, ಕೇರಳದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಇದರ ಪರಿಣಾಮ ಕರ್ನಾಟಕಕ್ಕೂ ತಟ್ಟಲಿದೆ.
ಕಳೆದ ಎರಡು ದಿನಗಳಿಂದ ಸ್ವಲ್ಪ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.