ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಪ್ರೇಕ್ಷಕರೆಲ್ಲರ ಗಮನ ಸೆಳೆದಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’ (Yello Jogappa Nin Aramane). ಈ ಟ್ರೈಲರ್ ನಲ್ಲಿ ಕಾಣಿಸಿರುವ ತಾಜಾತನ, ಗಹನವಾದ ಕಥನದ ಸುಳಿವುಗಳೆಲ್ಲ ಕಡೇ ಕ್ಷಣದ ಗಾಢ ಕೌತುಕವಾಗಿ ರೂಪಾಂತರ ಹೊಂದಿವೆ. ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಭಾವ ಮೂಡಿಸಿ, ನೋಡಬೇಕೆಂಬ ತುಡಿತ ಹೊಮ್ಮಿಸೋದು ಟ್ರೈಲರ್ ಒಂಥರ ಅಸಲೀ ಸಾರ್ಥಕತೆ. ಈ ನಿಟ್ಟಿನಲ್ಲಿ ಹೇಳೋದಾದರೆ ಸದರಿ ಸಿನಿಮಾ (Cinema) ಆ ವಿಚಾರದಲ್ಲಿ ಯಶ ಕಂಡಿದೆ. ಹೀಗೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಗಳಿಸಿಕೊಂಡಿರೋ ಟ್ರೈಲರ್ ಪ್ರಭೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಕಿರುತೆರೆಯಲ್ಲಿ ಯಶಸ್ವೀ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ಅವರ ಪಾಲಿಗಿದು ಮತ್ತಷ್ಟು ಹುರುಪಿನ ವಿದ್ಯಮಾನ.
Advertisement
ಏಕೆಂದರೆ, ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನು ಸೂಕ್ಷ್ಮವಾಗಿ ಗ್ರಹಿಸಿ ಗೆದ್ದಿರುವ ಹಯವದನ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ನಿರ್ದೇಶಕರಾಗಿ ಬೆಳ್ಳಿ ತೆರೆಗೆ ಪ್ರವೇಶಿಸುತ್ತಿದ್ದಾರೆ. ಕಿರುತೆರೆಯಲ್ಲಿ ವರ್ಷಗಟ್ಟಲೆ ಪ್ರಸಾರವಾಗಿದ್ದ ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ಹಯವದನ. ಕಿರುತೆರೆಯಲ್ಲಿ ಸೀರಿಯಲ್‌ಗಳನ್ನ ವಾರವಾರವೂ ಕುತೂಹಲ ಮೂಡುವಂತೆ, ಟಿಆರ್‌ಪಿ ರೇಸಿನಲ್ಲಿ ಮುಂಚೂಣಿ ಕಾಯ್ದುಕೊಳ್ಳುವಂತೆ ಕಟ್ಟಿ ಕೊಡುವುದು ಸವಾಲಿನ ಕೆಲಸ. ಅಂಥಾ ಸವಾಲನ್ನು ವರ್ಷಾಂತರಗಳ ಕಾಲ ಎದುರುಗೊಂಡು ಯಶಸ್ವಿ ನಿರ್ದೇಶಕರಾಗಿ ಹಯವದನ ಗೆಲುವು ಕಂಡಿದ್ದಾರೆ. ಅದರ ಫಲವಾಗಿಯೇ ಅಷ್ಟೂ ಸೀರಿಯಲ್ಲಿಗಳು ಕಿರುತೆರೆ ಪ್ರೇಕ್ಷಕರ ನೆನಪಿನಲ್ಲುಳಿದುಕೊಂಡಿವೆ.
Advertisement
Advertisement
ಇಂತಹ ಹಿನ್ನೆಲೆ ಹೊಂದಿರೋದರಿಂದಲೇ ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ಘೋಶಣೆಯಾದ ಕ್ಷಣದಿಂದಲೂ ಪ್ರೇಕ್ಷಕರು ಅದರತ್ತ ಕಣ್ಣಿಟ್ಟಿದ್ದರು. ಟ್ರೈಲರ್ ಮೂಲಕ ಅವರೆಲ್ಲ ತೃಪ್ತರಾಗಿದ್ದಾರೆ. ಹೀಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದೊಂದಿಗೆ ಬೆಳ್ಳಿ ತೆರೆ ಪ್ರವೇಶಿಸಿರುವ ಹಯವದನ ಈ ಸಿನಿಮಾಕ್ಕಾಗಿ ಹಲವಾರು ವರ್ಷಗಳ ಕಾಲ ಶ್ರಮ ಹಾಕಿದ್ದಾರೆ. ಮಾಡಿದರೆ ಹೊಸ ಬಗೆಯ ಸಿನಿಮಾವನ್ನೇ ಮಾಡಬೇಕೆಂಬುದು ಅವರ ತುಡಿತವಾಗಿತ್ತು. ಬಹುಶಃ ತರಾತುರಿ ಮಾಡಿದ್ದರೆ ಯಾವತ್ತೋ ಸಿನಿಮಾ ನಿರ್ದೇಶಕರಾಗಬಹುದಿತ್ತೇನೋ… ಈಗಿನ ಟ್ರೆಂಡಿಗೆ ತಕ್ಕಂತೆ ಬೇರೆಯದ್ದೇ ಧಾಟಿಯ ಕಥೆಯ ಧ್ಯಾನದಲ್ಲಿದ್ದ ಅವರು ಕಡೆಗೂ ಅಂದುಕೊಂಡಂತೆಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಅಂಥಾದ್ದೊಂದು ತೃಪ್ತ ಭಾವ ಅವರ ಮಾತುಗಳಲ್ಲಿಯೇ ಹೊಮ್ಮುತ್ತದೆ.
Advertisement
ಸಾಮಾನ್ಯವಾಗಿ ಜರ್ನಿ ಕಥೆಗಳತ್ತ ಕನ್ನಡದಲ್ಲಿ ಎಂದಿಗೂ ನೀಗದಂಥಾದ್ದೊಂದು ಬೆರಗಿದೆ. ಆದರಲ್ಲಿಯೇ ಭಿನ್ನ ಹಾದಿಯಲ್ಲಿ ಈ ಸಿನಿಮಾವನ್ನು ರೂಪಿಸಿರುವ ಸ್ಪಷ್ಟ ಸೂಚನೆ ಟ್ರೈಲರ್ ಮೂಲಕ ಸಿಕ್ಕಿದೆ. ಬೆಂಗಳೂರಿಂದ ಹಿಮಾಲಯದ ವರೆಗಿನ ವಿಶಿಷ್ಟವಾದೊಂದು ಪಯಣದ ಕಥನ ಇಲ್ಲಿದೆ. ಆ ಹಾದಿಯ ಪ್ರತೀ ಹೆಜ್ಜೆಗಳೂ ಪ್ರೇಕ್ಷಕರಿಗೆಲ್ಲ ಆಪ್ತ ಎನಿಸುವಂತೆ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಭಾರತದ ನಾನಾ ಪ್ರದೇಶಗಳಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಒಂದು ಸಿನಿಮಾಕ್ಕಾಗಿ ಒಂದಿಡೀ ಭಾರತ ಸುತ್ತಿ, ಅಲ್ಲಿನ ಚೆಂದದ ಲೊಕೇಷನ್ನುಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದರ ತಾಜಾತನ ಟ್ರೈಲರ್ ನೋಡಿದ ಪ್ರತಿಯೊಬ್ಬರನ್ನೂ ತೀವ್ರವಾಗಿಯೇ ತಾಕಿದೆ.
ಮೂಲತಃ ಬಾಗಲಕೋಟೆಯವರಾದ ಹಯವದನ ಸಿನಿಮಾ ಕನಸನ್ನಿಟ್ಟುಕೊಂಡು ಬೆಂಗಳೂರು ಸೇರಿಕೊಂಡಿದ್ದವರು. ಅವರ ಪಾಲಿಗೆ ಮೊದಲ ಅವಕಾಶ ಒಲಿದು ಬಂದಿದ್ದು ವೈಶಾಲಿ ಕಾಸರವಳ್ಳಿ ನಿರ್ದೇಶನದ ಮೂಡಲಮನೆ ಧಾರಾವಾಹಿಯ ಮೂಲಕ. ಮುಕ್ತ ಧಾರಾವಾಹಿ ಮೂಲಕ ಟಿ.ಎನ್ ಸೀತಾರಾಮ್ ಅವರ ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ಹಯವದನ ದಶಕಗಳ ಕಾಲ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅಗ್ನಿಸಾಕ್ಷಿ ಮತ್ತು ಶುಭ ಮಂಗಲ ಧಾರಾವಾಹಿಗಳನ್ನು ಬಾಹುಬಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಅರ್ಕಾ ಮೀಡಿಯಾ ವಕ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಅಂಥಾ ಪ್ರತಿಷ್ಠಿತ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆ ಹಯವದನ ಅವರದ್ದು.
ಇಂತಹ ಸುದೀರ್ಘ ಅನುಭವ ದಕ್ಕಿಸಿಕೊಂಡಿದ್ದ ಅವರು ಕಡೆಗೂ ಒಂದೊಳ್ಳೆ ಕಥೆಯ ಮೂಲಕ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರವನ್ನು ರೂಪಿಸಿದ್ದಾರೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಮೂಡಿ ಬಂದಿರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ ೨೧ರಂದು ತೆರೆಗಾಣಲಿದೆ.