– ಉಪ ಚುನಾವಣೆಗೆ ನಿಲ್ತೀನಿ, ಗೆಲ್ತೀನಿ ಎಂದ ಅನರ್ಹ ಶಾಸಕ
ಕಾರವಾರ: ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮುಂಡಗೋಡಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಿಂದ ಯಲ್ಲಾಪುರಕ್ಕೆ ಇಂದು ಆಗಮಿಸಿದ ಶಿವರಾಮ್ ಹೆಬ್ಬಾರ್, ಮುಂಡಗೋಡದಲ್ಲಿ ಬಿಜೆಪಿ ಸಭೆ ನಡೆಯುತ್ತಿದೆ ಎಂಬ ಸುದ್ದಿ ಸಿಗುತ್ತಿದ್ದಂತೆ ಅತ್ತ ಪ್ರಯಾಣ ಬೆಳೆಸಿದರು. ಸಭೆಗೆ ಹಾಜರಾದ ಅವರು ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಜೊತೆ ಮಾತುಕತೆ ನಡೆಸಿ, ಅಸಮಾಧಾನವನ್ನು ತಣಿಸುವ ಪ್ರಯತ್ನಿಸಿದ್ದಾರೆ.
Advertisement
Advertisement
ಇದಕ್ಕೂ ಮುನ್ನ ಯಲ್ಲಾಪುರದಲ್ಲಿ ಮಾತನಾಡಿದ ಅನರ್ಹ ಶಾಸಕರು, ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆ ದಿನ. ಅದು ನಮಗೆ ರಾಜಕೀಯ ನಿರ್ಣಯ ಕೈಗೊಳ್ಳಲೂ ಕೊನೆ ದಿನ. ನೂರಕ್ಕೆ ನೂರರಷ್ಟು ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
Advertisement
ಅನರ್ಹರಾಗುವುದಕ್ಕೂ ಚುನಾವಣೆಗೆ ನಿಲ್ಲುವುದಕ್ಕೂ ಸಂಬಂಧವಿಲ್ಲ. ಅನರ್ಹತೆ ಆ ದಿನಕ್ಕೆ ಅಷ್ಟೇ. ಪಿ.ದಿನಕರನ್ ಕೇಸ್‍ನಲ್ಲಿ 19 ಜನರಿಗೆ ಇದೇ ನಿರ್ಣಯವನ್ನು ನ್ಯಾಯಾಲಯ ನೀಡಿದೆ ಎಂದು ತಿಳಿಸಿದರು.
Advertisement
ಮಾಜಿ ಸ್ಪೀಕರ್ ವಿರುದ್ಧ ಗರಂ!
ಉದ್ದೇಶಪೂರ್ವಕವಾಗಿ, ರಾಜಕೀಯದ ಹಿತಾಸಕ್ತಿಗಾಗಿ, ಒಂದು ಪಕ್ಷದ ಕಾರ್ಯಕರ್ತರಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ಅನರ್ಹತೆ ನಿರ್ಣಯ ತೆಗೆದುಕೊಂಡರು. ನ್ಯಾಯಾಧೀಶರಾಗಿ ಅವರು ನಿರ್ಣಯ ತೆಗೆದುಕೊಂಡಿಲ್ಲ. ಸ್ಪೀಕರ್ ಸ್ಥಾನದಲ್ಲಿರುವವರು ಮನಸ್ಸಿಗೆ ಬಂದಂತೆ ಅನರ್ಹತೆ ಮಾಡುವಂತಿಲ್ಲ. 2023ರ ವೆರಗೂ ಅನರ್ಹತೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ನಿರ್ಣಯ ದೇಶದ ಇತಿಹಾಸದಲ್ಲಿ ಇದೇ ಮೊದಲು. ರಮೇಶ್ ಕುಮಾರ್ ಅವರ ಈ ನಿರ್ಧಾರ ಸಂವಿಧಾನ ವಿರೋಧಿ ಕ್ರಮ ಎಂದು ಹೇಳಿದರು.
ಸುಪ್ರೀಂಕೋರ್ಟ್ ಗುರುವಾರ ಮಧ್ಯಾಹ್ನದೊಳಗೆ ಯಾವುದಾದರೂ ಒಂದು ತೀರ್ಪು ನೀಡಲಿದೆ. ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಇಲ್ಲದಿದ್ದಲ್ಲಿ ಅದು ಸಾಂವಿಧಾನಿಕ ಬಿಕ್ಕಟ್ಟಾಗಲಿದೆ. ಅನರ್ಹತೆ ನಿರ್ಣಯ ಮಾಡದಿದ್ದರೇ ಕ್ಷೇತ್ರಕ್ಕೆ ಎರಡು ಶಾಸಕರಾಗಲಿದ್ದಾರೆ ಎಂದರು.
ಮಾಜಿ ಸ್ಪೀಕರ್ ನಡೆಯ ಬಗ್ಗೆ ಯೋಚಿಸಿಯೇ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವು. ಕೋರ್ಟ್ ನಮಗೆ ಮಧ್ಯಕಾಲಿಕ ತೀರ್ಪು ನೀಡಿತ್ತು. ವಿಧಾನಸಭೆಗೆ ಹೋಗುವುದು ಬಿಡೋದು ಶಾಸಕರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿತ್ತು. ಮುಂದುವರಿದ ಭಾಗವಾಗಿ ಕಳೆದ ಕೆಲವು ದಿನಗಳಿಂದ ವಾದ ಪ್ರತಿವಾದಗಳು ನಡೆದಿವೆ. ನಾನು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿಲ್ಲ. ತೀರ್ಪು ಬಂದ ಬಳಿಕ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದರೂ ಈವರೆಗೂ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಜೊತೆಗೆ ಯಾವುದೇ ಪಕ್ಷವೂ ತನ್ನ ಅಭ್ಯರ್ಥಿಯ ಹೆಸರನ್ನು ಹೆಸರನ್ನು ಘೋಷಿಸಿಲ್ಲ.