ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ನಾನಾ ರೂಪದಲ್ಲಿ ನಡೆಯುತ್ತಲೇ ಇದೆ. ಯಲಹಂಕದ ಕಾಲೇಜು ವಿದ್ಯಾರ್ಥಿಗಳು ಗೋಡೆಬರಹಗಳ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸಿದ್ದು ಈಗ ಈ ಪ್ರಕರಣಕ್ಕೆ ರಾಜಕೀಯ ಟ್ವಿಸ್ಟ್ ಸಿಕ್ಕಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳು ಗೋಡೆಬಹರಗಳನ್ನ ಬರೆದಿದ್ದ ವಿಚಾರ ಹೊಸ ರೂಪ ಪಡೆದಿದೆ. ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ, ವಿದ್ಯಾರ್ಥಿನಿಯರ ಡ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿದರು ಎಂದು ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾ ಪ್ರಕಟಣೆ ಹೊರ ತಂದಿದ್ದರು. ಇದನ್ನೂ ಓದಿ: ಖಾಸಗಿ ಕಾಲೇಜಿನಲ್ಲಿ ಸಿಎಎ ವಿರೋಧಿಸಿ ಗೋಡೆ ಬರಹ
Advertisement
Advertisement
ಇದಕ್ಕೆ ಸ್ಪಷ್ಟನೆ ನೀಡಿರುವ ಶಾಸಕ ಎಸ್. ಆರ್ ವಿಶ್ವನಾಥ್, ಕಾಲೇಜಿನ ಸುತ್ತಲೂ ರಸ್ತೆಗಳಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಪಾರ್ಕಿಂಗ್ ಮಾಡುವ ಬದಲು ಫುಟ್‍ಪಾತ್ ಮತ್ತು ರಸ್ತೆ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆಯೆಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಕಾಲೇಜಿಗೆ ಭೇಟಿ ನೀಡಿ ವಾಹನಗಳನ್ನು ಆವರಣದಲ್ಲಿ ನಿಲ್ಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ. ಮೋದಿ ಬಗ್ಗೆ ಆಕ್ಷೇಪಾರ್ಹ ಬರಹ ಮತ್ತು ಚಿತ್ರಗಳನ್ನು ಬರೆದಿದ್ದರು. ಅವುಗಳನ್ನು ಅಳಿಸಿ ಹಾಕಲಾಗಿದೆ. ಯಾರು ಆ ಚಿತ್ರಗಳನ್ನು ಬಿಡಿಸಿದ್ದರು ಎನ್ನುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆಸಲಾಗುತ್ತದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿನಿಯರ ಡ್ರೆಸ್ ವಿಚಾರವಾಗಿ ಪ್ರತಿಕ್ರಿಯಿಸಿ, ನಾನ್ಯಾಕೆ ಡ್ರೆಸ್ ಬಗ್ಗೆ ಮಾತನಾಡಲಿ ಎಂದು ಆರೋಪ ತಳ್ಳಿಹಾಕಿದ್ದಾರೆ.
Advertisement
Advertisement
ಶಾಸಕರ ಭೇಟಿ ನಂತರ ಈ ಗೋಡೆ ಬರಹದ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಶಾಸಕರ ಗೂಂಡಾಗಿರಿ ವರ್ತನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದು ಗೂಂಡಾವರ್ತನೆ ಎಂದು ದೂರಿದ್ದಾರೆ.
ಪ್ರಕರಣದ ವಿವಾದ ಹೆಚ್ಚಾಗುತ್ತಿದ್ದಂತೆ ಇಂದು ಕಾಲೇಜಿಗೆ ರಜೆ ನೀಡಲಾಗಿದ್ದು, ಶಾಸಕರ ವಿರುದ್ಧದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ವಿದ್ಯಾರ್ಥಿಗಳು ಇಡೀ ಪ್ರಕರಣದಿಂದ ಹಿಂದೆ ಉಳಿದಿದ್ದಾರೆ.
ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಈ ಬಗ್ಗೆ ಕಾಲೇಜಿನ ಆಡಳಿತ ಸಿಬ್ಬಂದಿ ಮಾತಾನಾಡಿ, ಗೋಡೆ ಬರಹಕ್ಕೂ ನಮ್ಮ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ನಾವು ಸ್ಥಳೀಯರೊಂದಿಗೆ ಸೌರ್ಹದಯುತವಾಗಿ ಇರುತ್ತೇವೆ ಎಂದಿದ್ದಾರೆ.
ಇತ್ತ ಸ್ಥಳೀಯರು ಮಾತ್ರ ಕಾಲೇಜಿನವರಿಗೆ ಎಷ್ಟೇ ಬಾರಿ ಹೇಳಿದರು ಕೇಳಿಲ್ಲ. ರಸ್ತೆನಲ್ಲೇ ಪಾರ್ಕಿಂಗ್ ಮಾಡುತ್ತಾರೆ. ಕಾಲೇಜಿನ ಸುತ್ತಮುತ್ತಲಿನ ವಾತಾವರಣದಲ್ಲೇ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾರೆ. ಇಲ್ಲಿನ ಮನೆಗಳಿಗೆ ಈ ವಿದ್ಯಾರ್ಥಿಗಳಿಂದ ಸಮಸ್ಯೆಗಳು ಆಗುತ್ತಿವೆ. ವಿದ್ಯಾರ್ಥಿಗಳ ವರ್ತನೆಯನ್ನ ಸರಿಮಾಡಿಕೊಳ್ಳುವಂತೆ ಕಾಲೇಜು ಮಂಡಳಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.