ಬೆಂಗಳೂರು: ಐಎಎಸ್ ಅಧಿಕಾರಿ ಎಂದು ನಕಲಿ ದಾಖಲೆ ಸೃಷ್ಟಿಸಿ ನಗರದ ಯಲಹಂಕ ವಾಯುನೆಲೆಯಲ್ಲಿ 2 ದಿನಗಳ ಕಾಲ ಮೊಕ್ಕಾಂ ಹೂಡಿದ್ದ ವ್ಯಕ್ತಿಯನ್ನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಪೂರ್ಣಚಂದ್ರ ದಾಸ್ ಬಂಧಿತ ಆರೋಪಿಯಾಗಿದ್ದು, ಸೆಪ್ಟೆಂಬರ್ 25ರಂದು ಯಲಹಂಕ ವಾಯನೆಲೆಯ ಒಳಗೆ ಪತ್ನಿಯೊಂದಿಗೆ ಪ್ರವೇಶ ಪಡೆದಿದ್ದ. ತಾನು ದೆಹಲಿ ಮೂಲದ ಐಎಎಸ್ ಅಧಿಕಾರಿ ಎಂದು ಗುರುತಿನ ಚೀಟಿ ನೀಡಿದ್ದ. ಅಲ್ಲದೇ ತಾನು ಡೈರೆಕ್ಟರೇಟ್ ಪರ್ಸನಲ್ ಆಂಡ್ ಟ್ರೈನಿಂಗ್‍ನಲ್ಲಿ ಅಧಿಕಾರಿ ಎಂದು ಹೇಳಿದ್ದ. ಅಲ್ಲದೇ ಸೆ. 25 ರಿಂದ 26ರವರೆಗೆ ಮೆಸ್ ನಲ್ಲಿ ರೂಮ್ ನೀಡುವಂತೆ ಕೇಳಿದ್ದ. ಇದರ ಅನ್ವಯ ಆಫೀಸರ್ಸ್ ಮೆಸ್‍ನಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಐಎಎಸ್ ಅಧಿಕಾರಿ ಎಂದು ಹೇಳಿದ್ದ ಪೂರ್ಣಚಂದ್ರ ದಾಸ್ ನೀಡಿದ್ದ ಗುರುತಿನ ಚೀಟಿ ಹಾಗೂ ಸಹಿ ಮಾಡುವ ವೇಳೆ ಬರೆದಿದ್ದ ಹೆಸರಿನಲ್ಲಿ ಅಕ್ಷರ ದೋಷ ಇರುವುದನ್ನು ಅಧಿಕಾರಿಗಳು ಗಮನಿಸಿದ್ದು, ಇದರಿಂದ ಅನುಮಾನಗೊಂಡು ದೆಹಲಿ ಕಚೇರಿಗೆ ಸಂಪರ್ಕ ಮಾಡಿದ್ದಾರೆ. ಈ ವೇಳೆ ಪೂರ್ಣಚಂದ್ರ ದಾಸ್ ನಕಲಿ ಐಎಎಸ್ ಅಧಿಕಾರಿ ಎಂದು ತಿಳಿದುಬಂದಿದೆ.
ಸದ್ಯ ಆರೋಪಿಯ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 419 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಬಂಧಿಸಲಾಗಿರುವ ಪೂರ್ಣಚಂದ್ರ ದಾಸ್ 2017 ರಲ್ಲೂ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್‍ನಲ್ಲಿ ತಂಗಿದ್ದ ಕುರಿತು ಮಾಹಿತಿ ಲಭಿಸಿದ್ದು, 5 ದಿನಗಳ ಕಾಲ ಐಎಎಸ್ ಅಧಿಕಾರಿ ಎಂದು ರೂಮ್ ಪಡೆದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪೂರ್ಣಚಂದ್ರ ದಾಸ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ನಕಲಿ ಅಧಿಕಾರಿಯ ಹೆಸರಿನಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಕುರಿತು ಅನುಮಾನ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv