ಚಿಕ್ಕಬಳ್ಳಾಪುರ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕೆಲಸ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.
ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರ ಅಭಿವೃದ್ಧಿ ಕಾಂಗ್ರೆಸ್-ಜೆಡಿಎಸ್‍ನಿಂದ ಮಾತ್ರ ಸಾಧ್ಯ. ಆದರೆ ಬಿಜೆಪಿಯ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕಾಯಕ ಎಂದು ಟೀಕೆ ಮಾಡಿದರು.
Advertisement
Advertisement
ಈಗಾಗಲೇ ದೆಹಲಿಗೆ ಯಡಿಯೂರಪ್ಪ ವರ್ಗಾವಣೆಯ 1,800 ಕೋಟಿ ರೂಪಾಯಿಯ ಡೈರಿ ಸಿಕ್ಕಿದೆ. ಅದನ್ನು ಈಗ ಮೋದಿ ಸರ್ಕಾರ ಅಡಗಿಸಬಹುದು. ಮುಂದೆ ಚುನಾವಣೆ ನಂತರ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಅದನ್ನು ಬಯಲು ಮಾಡ್ತೇವೆ ಎಂದರು.
Advertisement
Advertisement
ಕಳೆದ ಎರಡು ಬಾರಿ ನೀವು ಸಂಸದರಾಗಿ ಆಯ್ಕೆ ಮಾಡಿದ್ದು, ಈ ಬಾರಿಯೂ ನೀವು ನಮಗೆ ಅವಕಾಶ ಮಾಡಿಕೊಡಿ. ಈ ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ ಭದ್ರವಾಗಿರಬೇಕು. ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕಿದೆ. ಇದಲ್ಲದೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನೀವು ನನಗೆ ಮತ ನೀಡಬೇಕಿದೆ. ಮನೆ ಮನೆಯಲ್ಲಿ ಯುವಕ – ಯುವತಿಯರಿಗೆ ಕೆಲಸ, ಹೊಲ, ಹೊಲಕ್ಕೆ ಜಲ, ಮನೆ ಮನೆಗೆ ಕುಡಿಯುವ ನೀರು ಈ ಮೂರು ದೀಕ್ಷೆಗಳನ್ನು ಈಡೇರಿಸಲು ತಾವು ಮತ ನೀಡಬೇಕು ಎಂದು ವೀರಪ್ಪ ಮೊಯ್ಲಿ ತಮ್ಮ ಪ್ರಚಾರ ಭಾಷಣದಲ್ಲಿ ಮನವಿ ಮಾಡಿಕೊಂಡರು.
ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ, ತೂಬಗರೆ, ಮೇಳೆಕೋಟೆ ಹಾಗೂ ಕಾರಹಳ್ಳಿ ಗ್ರಾಮಗಳಲ್ಲಿ ವೀರಪ್ಪ ಮೊಯ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ವೀರಯ ಮೊಯ್ಲಿಗೆ ದೇವನಹಳ್ಳಿ ಜೆಡಿಎಸ್ ಶಾಸಕ ನಾರಾಯಣಸ್ವಾಮಿ, ವಸತಿ ಸಚಿವ ಎಂಟಿಬಿ ನಾಗರಾಜ್ ಸಾಥ್ ನೀಡಿದರು.