ಬದ್ರುದ್ದೀನ್ ಕೆ ಮಾಣಿ
“ರಾಜ್ಯ ಸರ್ಕಾರ ಚೆನ್ನಾಗಿ ನಡೆಯುತ್ತಾ ಇರೋದೇ ಸಿಎಂ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ `ಕೆಮಿಸ್ಟ್ರಿ’ಯಲ್ಲಿ, ಮಾಧ್ಯಮದವರಿಗೆ ಇದೆಲ್ಲಾ ಗೊತ್ತಾಗೊಲ್ಲಾ” ಅಂತ ಆಡಳಿತ ಪಕ್ಷದ ಶಾಸಕರೊಬ್ಬರು ವಿಧಾನಸಭೆ ಮೊಗಸಾಲೆಯಲ್ಲಿ ಹೇಳಿದಾಗ ನನಗೆ ಸಹಜವಾದ ಕುತೂಹಲ. ಹೌದಲ್ವೇ, ಯಡಿಯೂರಪ್ಪ ಆಡಳಿತದ ವೈಖರಿಯ ಬಗ್ಗೆ ಸ್ವಪಕ್ಷೀಯರು, ಶಾಸಕರಲ್ಲೇ ಅತೃಪ್ತಿ ಅಸಮಾಧಾನ ಆರಂಭವಾಗಿರುವಾಗ, ಪ್ರತಿಪಕ್ಷ ನಾಯಕರ ‘ಕೆಮಿಸ್ಟ್ರಿ’ ಏನಿರಬಹುದು ಅಂತ ಕೆದಕುತ್ತಾ ಹೋಗಬೇಕಾಯಿತು.
Advertisement
ಹಾಲಿ ಸಿಎಂ ಬಿಎಸ್‍ವೈ ಹಾಗೂ ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 1983ರಲ್ಲಿ ಏಕಕಾಲದಲ್ಲಿ ವಿಧಾನಸಭೆ ಸದಸ್ಯರಾದವರು. ಶಿಕಾರಿಪರ ಪುರಸಭೆ ಅಧ್ಯಕ್ಷ ಗಾದಿಯಿಂದ ವಿಧಾನಸಭೆಗೆ ಕಾಲಿಟ್ಟ ಬಿಎಸ್‍ವೈ, ನಂತರ ಹಂತ-ಹಂತವಾಗಿ ಬೆಳೆದು ಸಿಎಂ ಗಾದಿಗೆ ಬಂದವರು. ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಅನುಭವಿ ರಾಜಕಾರಣಿ. ಮೈಸೂರಿನಲ್ಲಿ ವಕೀಲರಾಗಿದ್ದ ಸಿದ್ದರಾಮಯ್ಯ, ರೈತನಾಯಕ ಪ್ರೊ.ನಂಜುಂಡಸ್ವಾಮಿ ಪ್ರಭಾವಕ್ಕೊಳಗಾಗಿ ರಾಜಕೀಯಕ್ಕೆ ಧುಮುಕಿ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಶಾಸಕರಾದವರು. ನಂತರ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕೃಪೆಯಿಂದ ಬೆಳೆದು ಹಂತಹಂತವಾಗಿ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಸಾಗಿ ರಾಜ್ಯದ ಮುಖ್ಯಮಂತ್ರಿಯಾದವರು.
Advertisement
ಹೀಗೆ ಈ ಇಬ್ಬರು ರಾಜಕಾರಣಿಗಳ ಅನುಭವ ಅಪಾರ, ಆದರೆ ಇಬ್ಬರೂ ವೈರುಧ್ಯದ ತತ್ವ-ಸಿದ್ಧಾಂತಗಳನ್ನ ಹೊದ್ದುಕೊಂಡು ರಾಜಕಾರಣ ಮಾಡಿದವರು. ಇಬ್ಬರದ್ದು ಎಂದೂ ಒಂದಾಗದ ವೈಚಾರಿಕ ಸಂಘರ್ಷ ಅಂತಲೇ ಅಂದುಕೊಂಡಿದ್ದೆವು. ಒಬ್ಬರು ಆಡಳಿತ ಪಕ್ಷದಲ್ಲಿದ್ದಾಗ, ಮತ್ತೊಬ್ಬರು ಪ್ರತಿಪಕ್ಷದಲ್ಲಿದ್ದು ಪರಸ್ಪರ ಎದುರಾಳಿಗಳಾಗಿ ಹೋರಾಟ ಮಾಡಿಕೊಂಡು ಬಂದಿದ್ದೇ ಹೆಚ್ಚು. ಯಾವತ್ತೂ ಒಂದೇ ಹಾದಿಯಲ್ಲಿ ಚಿಂತನೆ ನಡೆಸಿ, ಒಮ್ಮತ ಮೂಡಿಸಿಕೊಂಡಿದ್ದು ಇಲ್ಲವೇ ಇಲ್ಲ. ಹಾಗಾದ್ರೆ, ಈಗ ಆಡಳಿತ ನಡೆಸುತ್ತಿರುವ ಬಿಎಸ್‍ವೈ ಹಾಗೂ ಪ್ರತಿಪಕ್ಷದಲ್ಲಿರುವ ಸಿದ್ದರಾಮಯ್ಯ ಒಂದಾಗಿ ಸುಗಮ ಆಡಳಿತಕ್ಕೆ ಕಾರಣರಾಗ್ತಾರೆ ಅಂದ್ರೆ ನಂಬೋದಕ್ಕೆ ಆಗುತ್ತಾ?. ಇತ್ತೀಚಿನ ಕೆಲವು ನಡೆದ ವಿದ್ಯಾಮಾನಗಳನ್ನು ನೋಡ್ತಾ ಇದ್ರೆ, ಬಿಎಸ್‍ವೈ ಮತ್ತು ಸಿದ್ದರಾಮಯ್ಯ ನಡುವಿನ `ಕೆಮಿಸ್ಟ್ರಿ’ ಬಗ್ಗೆ ಅನುಮಾನ ಮೂಡುವುದು ಸಹಜ. ಹಾಗಂತ ಅವರಿಬ್ಬರು ನಂಬಿಕೊಂಡಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿ ರಾಜಿ ಮಾಡಿಕೊಂಡಿದ್ದಾರೆ ಅಂತ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿಗೆ ತಕ್ಕಹಾಗೆ ಹೊಂದಾಣಿಕೆ ಮಾಡಿಕೊಂಡಿರಬಹುದೇನೋ ಅಂತ ಅನ್ನಿಸುತ್ತೆ.
Advertisement
Advertisement
ಸಿದ್ದರಾಮಯ್ಯ ಸಿಎಂ ಆಗುವ ಮುನ್ನ ಮತ್ತು ಆದ ಬಳಿಕ ಪದೇ ಪದೇ ಹೇಳುತ್ತಾ ಇದ್ರು, ಇದೇ ನನ್ನ ಕೊನೆಯ ಚುನಾವಣೆ ಮತ್ತೆ ಚುನಾವಣೆಗೆ ಸ್ಫರ್ದಿಸಲ್ಲ. ಚುನಾವಣೆ ರಾಜಕೀಯದಿಂದ ದೂರವಾಗಿ ಸಕ್ರಿಯ ರಾಜಕಾರಣದಲ್ಲಿ ಮಾತ್ರ ಇರುತ್ತೇನೆ ಅಂತ. ಆದರೆ, ಅವರ ಸಿಎಂ ಅವಧಿ ಪೂರ್ಣಗೊಂಡು 2018ರಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದರು. ತಮ್ಮ ಪುತ್ರ ಡಾ.ಯತೀಂದ್ರಗೆ ಸ್ವಕ್ಷೇತ್ರ ವರುಣಾ ಬಿಟ್ಟುಕೊಟ್ಟು, ಹಳೆಯ ಚಾಮುಂಡೇಶ್ವರಿ ಮತ್ತು ದೂರದ ಬದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರು. ಸ್ವಕ್ಷೇತ್ರ ವರುಣಾದಲ್ಲಿ ಸೂಕ್ತ ಎದುರಾಳಿ ಕೂಡ ಇಲ್ಲದ ಕಾರಣ ಪುತ್ರನ ಹಾದಿ ಸುಗಮ ಅಂತಲೇ ಭಾವಿಸಲಾಗಿತ್ತು. ಆದ್ರೆ, ವರುಣಾ ಕ್ಷೇತ್ರದಿಂದಲೇ ರಾಜಕೀಯ ಆರಂಭಿಸಲು ಮುಂದಾದ ಸಿಎಂ ಪುತ್ರ ವಿಜಯೇಂದ್ರ ಅವರ ಎಂಟ್ರಿ ಸಿದ್ದರಾಮಯ್ಯ ಅವರಿಗೆ ಆತಂಕ ಮೂಡಿಸಿತ್ತು. ವರುಣಾ ಕ್ಷೇತ್ರದಾದ್ಯಂತ ನೆಲೆ ಗಟ್ಟಿ ಮಾಡಿಕೊಳ್ಳಲು ಮುಂದಾದ ವಿಜಯೇಂದ್ರ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ವಿಜಯೇಂದ್ರ ಸ್ಪರ್ಧಿಸಿದ್ರೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಕಷ್ಟವಾಗುತ್ತೆ ಅನ್ನೋ ಮಟ್ಟಿಗೆ ವಾತಾವರಣ ನಿರ್ಮಾಣವಾಗಿತ್ತು.
ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದ ವಿಜಯೇಂದ್ರ ಇನ್ನೇನು ಕಣಕ್ಕಿಳಿಯಬೇಕು ಅನ್ನುವಷ್ಟರಲ್ಲಿ ಕ್ಷೇತ್ರಕ್ಕೆ ಬಂದ ಬಿಎಸ್‍ವೈ, ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲ ಅಂತ ಹೇಳಿ, ಯತೀಂದ್ರ ಹಾದಿ ಸುಗಮ ಆಗುವಂತೆ ಮಾಡಿದ್ರು. ಆಗಲೇ ಜನ ಮಾತನಾಡಿಕೊಂಡಿದ್ರು ಏನೋ ಒಳ ಒಪ್ಪಂದ ಆಗಿದೆ ಅಂತ, ಬಿಎಸ್‍ವೈ-ಸಿದ್ದರಾಮಯ್ಯ `ಕೆಮಿಸ್ಟ್ರಿ’ಗೆ ಮುನ್ನುಡಿಯಾಗಿದ್ದೇ ವರುಣಾ ಚುನಾವಣೆ ಅಂತ ಹೇಳಲಾಗಿತ್ತು. 2018ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಮಾಡಿಕೊಂಡು ಆಡಳಿತ ನಡೆಸಲು ಮುಂದಾಯಿತು, ಎಚ್‍ಡಿ ದೇವೇಗೌಡರನ್ನು ಸದಾ ವಿರೋಧಿಸುತ್ತಾ ಬಂದಿದ್ದ ಸಿದ್ದರಾಮಯ್ಯ ಅವರು ಒಲ್ಲದ ಮನಸ್ಸಿನಿಂದಲೇ ಮೈತ್ರಿಗೆ ಒಪ್ಪಿಗೆ ನೀಡಿದ್ರು.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗ ಸಮನ್ವಯ ಸಮಿತಿಯ ನೇತೃತ್ವವನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಯಿತು. ಮೈತ್ರಿ ಸರ್ಕಾರದ ಅವಧಿಯ ಉದ್ದಕ್ಕೂ ಪರಸ್ಪರ ವಿರುದ್ಧ ದಿಕ್ಕಿನಲ್ಲೇ ಸಿದ್ದರಾಮಯ್ಯ ಮತ್ತು ಎಚ್‍ಡಿಕೆ ಕಾರ್ಯನಿರ್ವಹಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆರಂಭದಲ್ಲಿ ಒಳಗೊಳಗೆ ಆರಂಭವಾದ ಕಿತ್ತಾಟ, ನಂತರ ಬಹಿರಂಗವಾಗಿಯೇ ನಡೆದಿದ್ದು ಇತಿಹಾಸ. ತಮ್ಮ ಆಪ್ತರಿಗೆ ಮನ್ನಣೆ ಸಿಗುತ್ತಿಲ್ಲ, ಸಿಎಂ ಕುಮಾರಸ್ವಾಮಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕ್ಯಾತೆ ತೆಗೆಯಲು ಆರಂಭಿಸಿದ ಸಿದ್ದರಾಮಯ್ಯ, ಅಕ್ಷರಶ: ಮೈತ್ರಿ ಸರ್ಕಾರವನ್ನು ತೆರೆಮರೆಯಲ್ಲೇ ವಿರೋಧಿಸುತ್ತಾ ಬಂದರು. ತಮ್ಮ ಬಳಗದ ಬಹುತೇಕ ಶಾಸಕರು ಸರ್ಕಾರದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದ್ರು ಅನ್ನೋ ಆಪಾದನೆ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂತು.
ಸಿದ್ದರಾಮಯ್ಯ ಆಪ್ತರೆಂದೇ ಗುರುತಿಸಿಕೊಂಡಿದ್ದ ಹಲವು ಶಾಸಕರು ಬಂಡೆದ್ದು ಪಕ್ಷ ತೊರೆದು ರಾಜೀನಾಮೆ ನೀಡಿ ಬಿಜೆಪಿಯನ್ನು ಬೆಂಬಲಿಸಿ ಬಿಎಸ್‍ವೈ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದಕ್ಕೆ, ಸಿದ್ದರಾಮಯ್ಯ ಅವರೇ ಪರೋಕ್ಷ ಕಾರಣ ಅನ್ನೋ ಆರೋಪ ಕೂಡ ಇದೆ. “ಶತ್ರುವಿನ ಶತ್ರು ಮಿತ್ರ” ಎಂಬಂತೆ, ಎಚ್‍ಡಿಕೆ ಅವರಿಗಿಂತ ಬಿಎಸ್‍ವೈ ಮೇಲು ಎಂಬ ಧೋರಣೆ ಸಿದ್ದರಾಮಯ್ಯರಿಂದ ವ್ಯಕ್ತವಾದಂತಿತ್ತು. ಶಾಸಕರ ಪಕ್ಷಾಂತರದ ಬಳಿಕ ನಡೆದ ಉಪಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಸಿದ್ದರಾಮಯ್ಯ ನಡೆದುಕೊಂಡ ರೀತಿ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಗೆದ್ದು ಬಿಎಸ್‍ವೈ ಸರ್ಕಾರ ಸುಭದ್ರವಾಗುವಂತಾಯಿತು. ಆಗಲೂ ಸಿದ್ದರಾಮಯ್ಯ ಅವರನ್ನು ಅನುಮಾನದಿಂದ ನೋಡುವಂತಾಗಿದ್ದು ಸುಳ್ಳಲ್ಲ.
ಇತ್ತೀಚೆಗೆ, ವಿಧಾನಸಭೆಯಿಂದ ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ, ಬಿಎಸ್‍ವೈ ಮೇಲೆ ಅವರಿಗಿರುವ ಮೃದುಧೋರಣೆ ಮತ್ತೊಮ್ಮೆ ಸಾಬೀತಾಗುವಂತಾಯಿತು. ಡಿಸಿಎಂ ಲಕ್ಷ್ಮಣ ಸವದಿ ಅಭ್ಯರ್ಥಿಯಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಒಳಗೊಳಗೆ ಅತೃಪ್ತಿ ಹೊಗೆಯಾಡುತ್ತಿದ್ದದ್ದು ಗೊತ್ತಿದ್ದರೂ, ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರಿಸ್ಥಿತಿಯ ಲಾಭ ಪಡೆಯಲು ಸಿದ್ದರಾಮಯ್ಯ ಮುಂದಾಗಿಲ್ಲ ಅನ್ನೋ ಆರೋಪ. ಬಿಜೆಪಿ ಶಾಸಕರೇ ಹೇಳುವಂತೆ, ಒಂದು ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮೂಲಕ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದ್ದಿದ್ರೆ ಪ್ರಬಲ ಪೈಪೋಟಿ ಇರುತ್ತಿತ್ತು. ಯಾಕೆಂದರೆ, ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಪಟ್ಟ ನೀಡಿರೋದಕ್ಕೆ ಬಿಜೆಪಿಯೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದು ಬಹಿರಂಗ ಸತ್ಯ.
ಅಧಿವೇಶನದ ವೇಳೆ, ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರ ಬಾಡಿ ಲಾಂಗ್ವೇಜ್ ನೋಡಿದ್ರೆ, ಕನಿಷ್ಠ 25-30 ಶಾಸಕರು ಅಡ್ಡ ಮತದಾನ ಮಾಡುತ್ತಿದ್ದರೇನೋ ಎನ್ನುವಂತಿತ್ತು. ಆದರೆ, ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ, ಬಿಎಸ್‍ವೈ ಸರ್ಕಾರಕ್ಕೆ ಕುತ್ತು ತರುವ ಅಥವಾ ಮುಜುಗರ ಉಂಟುಮಾಡುವ ಪ್ರಯತ್ನವನ್ನೇ ಮಾಡಲಿಲ್ಲ ಅನ್ನೋ ಅಪವಾದ ಹೊರುವಂತಾಗಿದೆ. ಇದನ್ನ ಉಲ್ಲೇಖಿಸಿಯೇ ಬಿಜೆಪಿ ಶಾಸಕರು ಹೇಳಿದ್ದು, “ಸರ್ಕಾರ ಸುಗಮವಾಗಿ ನಡೆಯುತ್ತಿರುವುದೇ, ಸಿದ್ದರಾಮಯ್ಯ-ಬಿಎಸ್‍ವೈ ನಡುವಿನ “ಕೆಮಿಸ್ಟ್ರಿ”ಯಿಂದ ಅಂತ”.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ನೀಡುತ್ತಿರುವ ಸಹಕಾರಕ್ಕೆ ಪ್ರತಿಯಾಗಿ, ಅವರ ಕ್ಷೇತ್ರ ಬದಾಮಿ ಅಭಿವೃದ್ಧಿಗೆ ಹಿಂದು-ಮುಂದು ನೋಡದೇ ಅಧಿವೇಶನದ ಸಂದರ್ಭದಲ್ಲಿ 600 ಕೋಟಿಯನ್ನ ಬಿಎಸ್‍ವೈ ಮಂಜೂರು ಮಾಡಿಯೇ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಏನೇ ಕೇಳಿದ್ರೂ ಬಿಎಸ್‍ವೈ ಇಲ್ಲ ಎನ್ನುತ್ತಿಲ್ಲವಂತೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಅಡಳಿತ ಪಕ್ಷದ ಶಾಸಕರು ಪದೇ ಪದೇ ಅಡ್ಡಿ ಪಡಿಸುತ್ತಿದ್ದಾಗ, ಮಧ್ಯಪ್ರವೇಶಿಸಿದ್ದ ಯಡಿಯೂರಪ್ಪ, ಯಾರೂ ಅಡ್ಡಿಪಡಿಸದೇ ಪ್ರತಿಪಕ್ಷ ನಾಯಕರ ಮಾತನ್ನು ಆಲಿಸುವಂತೆ ತಮ್ಮ ಶಾಸಕರಿಗೆ ತಾಕೀತು ಮಾಡಿದ್ರು. ಹೀಗೆ, ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಿಗೆ ಇನ್ನಿಲ್ಲದ ಮಾನ್ಯತೆ ನೀಡ್ತಿದ್ರು ಬಿಎಸ್‍ವೈ.
ಕಲಾಪದ ಮೊದಲ ದಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಅವಕಾಶ ಕೋರಿದ್ದ ಪ್ರತಿಪಕ್ಷದ ನಾಯಕರ ಬೇಡಿಕೆಯನ್ನು ಸ್ಪೀಕರ್ ಮತ್ತು ಆಡಳಿತ ಪಕ್ಷದ ನಾಯಕರು ತಿರಸ್ಕರಿಸಿದ್ದರು. ಸಭಾತ್ಯಾಗ ಮಾಡಿ ಪಟ್ಟು ಹಿಡಿದು ಕುಳಿತು, ಅಸಹಕಾರದ ಮುನ್ಸೂಚನೆ ನೀಡಿದ್ದ ಸಿದ್ದರಾಮಯ್ಯರೊಂದಿಗೆ ಸಂಧಾನ ಮಾಡಿ ಸುಗಮ ಕಲಾಪಕ್ಕೆ ಅವಕಾಶವಾಗುವಂತೆ ಮಾಡಿದ್ದು ಸಿಎಂ ಯಡಿಯೂರಪ್ಪ. ಹೀಗೆ, ಹತ್ತು ಹಲವು ವಿದ್ಯಮಾನಗಳು ಬಿಎಸ್‍ವೈ-ಸಿದ್ದರಾಮಯ್ಯ ನಡುವೆ ಹೊಂದಾಣಿಕೆಯ ರಾಜಕಾರಣಕ್ಕೆ ಸಾಕ್ಷಿಗಳಾಗಿವೆ. ಹಾಗಂತ ಅವರಿಬ್ಬರು ದ್ವೇಷ ವೈಷಮ್ಯದ ರಾಜಕೀಯ ಮಾಡಬೇಕಿತ್ತು ಅಂತ ಅಲ್ಲ. ಪ್ರತಿಪಕ್ಷ ಮತ್ತು ಆಡಳಿತಪಕ್ಷಗಳ ನಾಯಕರ ನಡುವೆ ಇಂತಹ ಒಂದು ಹೊಂದಾಣಿಕೆ ಪ್ರವೃತ್ತಿ, ಮೃದುಧೋರಣೆಗಳು ಇತ್ತೀಚಿನ ದಿನಗಳಲ್ಲಿ ತುಂಬಾ ವಿರಳ ಅಂತಲೇ ಹೇಳಬೇಕು. ಹೀಗಾಗಿಯೇ ಬಿಎಸ್‍ವೈ-ಸಿದ್ದರಾಮಯ್ಯ ನಡುವಿನ ಕೆಮಿಸ್ಟ್ರಿಗೆ ಮಹತ್ವ ಬಂದಿರೋದು.
ಸಿಎಂ ಬಿಎಸ್‍ವೈ ಅವರು ಫೆಬ್ರವರಿ 27ರಂದು 78ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಆಯೋಜಿಸಿರುವ ಸಮಾರಂಭಕ್ಕೆ ಸಿದ್ದರಾಮಯ್ಯ ಅವರು ಕೂಡ ಮುಖ್ಯ ಅತಿಥಿ. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು, ಖುದ್ದಾಗಿ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಸಮಾರಂಭಕ್ಕೆ ಆಹ್ವಾನಿಸಿರುವುದು ಕೂಡ ಇಬ್ಬರು ನಾಯಕರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಏನೇ ಇರಲಿ, ಸಿಎಂ ಬಿಎಸ್‍ವೈ ಆಡಳಿತಕ್ಕೆ ಪಕ್ಷದ ಶಾಸಕರು, ನಾಯಕರ ಅಡ್ಡಿ-ಅತಂಕ, ಕಿರಿಕಿರಿಗಳೇನೇ ಇದ್ದರೂ, ಪ್ರತಿಪಕ್ಷಗಳೊಂದಿಗೆ ‘ಮ್ಯಾಚ್ ಫಿಕ್ಸಿಂಗ್’ ಮಾಡಿಕೊಂಡು ದಡ ಸೇರುವ ಲೆಕ್ಕಾಚಾರ ಇದೆಯಲ್ಲ ಅದೇ ರಾಜಕಾರಣದ ‘ಕೆಮಿಸ್ಟ್ರಿ’.
[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]