ಬೆಂಗಳೂರು: ಚುನಾವಣಾ ಟಿಕೆಟ್ ಸಂಬಂಧ ಇವತ್ತಿನಿಂದ ಏಪ್ರಿಲ್ 6 ತನಕ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ದಿನಗಳ ಕಾಲ ಈ ಸಭೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಚರ್ಚೆ ನಡೆಸುತ್ತೇವೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ. ಎರಡು-ಮೂರು ಸರ್ವೆಗಳನ್ನು ನಡೆಸಿದ್ದೇವೆ, ಆ ಕುರಿತು ಚರ್ಚೆ ನಡೆಸಲಾಗುತ್ತದೆ. ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಿದ ಬಳಿಕ ಮೊದಲ ಪಟ್ಟಿ ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisement
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಾಲೂಕು ಅಧ್ಯಕ್ಷ, ತಾಲೂಕು ಪ್ರಧಾನ ಕಾರ್ಯದರ್ಶಿ, ಮಂಡಲ ಅಧ್ಯಕ್ಷರನ್ನು ಸಭೆಗೆ ಬರುವಂತೆ ಸೂಚಿಸಿಲಾಗಿದೆ. ಪ್ರಕಾಶ್ ಜಾವ್ಡೇಕರ್, ಪಿಯೂಶ್ ಗೋಯಲ್, ಮುರಳೀಧರ್ ರಾವ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.
Advertisement
ಮೊದಲಿಗೆ ಬೆಂಗಳೂರು ನಗರದ ಪ್ರಮುಖರ ಜೊತೆ ಸಭೆ ನಡೆಯಲಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅಂತಿಮಗೊಳ್ಳಲಿದೆ. ಮೊದಲ ದಿನವಾದ ಇಂದು 73 ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಜೊತೆ ಚರ್ಚೆ ನಡೆಯಲಿದೆ. ಬೆಳಗ್ಗೆ ಬೆಂಗಳೂರು, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಯಲಿದೆ. ಮಧ್ಯಾಹ್ನ ಬಳ್ಳಾರಿ, ರಾಯಚೂರು, ಕೊಪ್ಪಳ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಯಲಿದೆ ಎಂದು ತಿಳಿಸಿದರು.
Advertisement
ಏಪ್ರಿಲ್ 8 ಮತ್ತು 9 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಈ ವೇಳೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯ ಚುನಾವಣಾ ಸಮಿತಿ ಅನುಮೋದಿಸಲಿದೆ. ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಮುಂದಿಟ್ಟು ಅಮಿತ್ ಶಾ ಅನುಮೋದನೆ ಪಡೆಯಲಿದ್ದಾರೆ. ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ, ಚುನಾವಣಾ ವೆಚ್ಚ, ನಾಯಕರ ಪ್ರಚಾರದ ಸಮಯ ನಿಗದಿ ಇತ್ಯಾದಿ ವಿಚಾರಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
Advertisement
ಮೂರು ದಿನಗಳ ಕಾಲ ಸಭೆ ನಡೆಸಲು ಬಿಜೆಪಿ ಚುನಾವಣಾ ಆಯೋಗದಿಂದ ಅನುಮತಿ ಪಡೆದಿದೆ. ಬಿಜೆಪಿ ಸಭೆ ನಡೆಯುತ್ತಿರುವ ಸ್ಥಳಕ್ಕೆ ಚುನಾವಣಾಧಿಕಾರಿಗಳು ಭೇಟಿ ನೀಡಿದರು. ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿದೆಯಾ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಭೆ ನಡೆಯುತ್ತಿರುವ ಸ್ಥಳದಲ್ಲಿ ಚುನಾವಣಾ ಅಧಿಕಾರಿಗಳು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.