ಬೆಂಗಳೂರು: ಇಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೆಲಮಂಗಲ ತಾಲೂಕಿನ ಮೈಲನಹಳ್ಳಿಗೆ ಆಗಮಿಸಿದ್ದರು.
ಗ್ರಾಮದಲ್ಲಿ ದಲಿತ ಸಮುದಾಯದ ಜೊತೆ ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ಅವರಿಗೆ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಾವಣೆಯ ಹೇಳಿಕೆ ನೀಡುತ್ತಾರೆ ಅದು ಎಷ್ಟು ಸರಿ..? ಎಂದು ಗ್ರಾಮಸ್ಥ ಅಂಜನಮೂರ್ತಿ ಬಹಿರಂಗವಾಗಿ ಪ್ರಶ್ನೆ ಹಾಕಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ನಿಮ್ಮ ಪಕ್ಷದ ಸಂಸದರೇ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಅಂತಾ ಹೇಳ್ತಾರೆ. ಇಂದು ನೀವು ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದೀರಿ. ಹಾಗಾದ್ರೆ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆಯ ವಿಚಾರವಾಗಿ ನಿಮ್ಮದು ಹಾಗೂ ಬಿಜೆಪಿಯ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಕ್ರೋಶ ಹೊರಹಾಕಿದ್ರು.
Advertisement
ಅಂಜನಮೂರ್ತಿ ಪ್ರಶ್ನೆ ಕೇಳುತ್ತಿದ್ದಂತೆ ಪೊಲೀಸರು ಅವರನ್ನು ಕಾರ್ಯಕ್ರಮದಿಂದ ಹೊರಗಡೆ ಕರೆದುಕೊಂಡು ಹೋಗಲು ಮುಂದಾದ್ರು. ಕೂಡಲೇ ಯಡಿಯೂರಪ್ಪ ಪೊಲೀಸರನ್ನು ತಡೆದು, ಈ ಹಿಂದೆ ಸಾಕಷ್ಟು ಬಾರಿ ಸಂವಿಧಾನದ ತಿದ್ದುಪಡಿ ಆಗಿದೆ. ಪ್ರಪಂಚದಲ್ಲಿ ಉತ್ತಮವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಈಗಾಗಲೇ ಅನಂತ್ ಕುಮಾರ್ ಹೆಗ್ಡೆ ತಮ್ಮ ಹೇಳಿಕೆಗೆ ಕ್ಷಮೆಯನ್ನು ಕೋರಿದ್ದಾರೆ ಅಂತಾ ಸಮಾಧಾನಪಡಿಸಿದ್ದಾರೆ.