ಬೆಂಗಳೂರು: ಜೆಡಿಎಸ್ ಎಂಎಲ್‍ಎ ನಾಗನಗೌಡ ಅವರ ಮಗ ಶರಣಗೌಡ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಕಥೆಯನ್ನು ಕಟ್ಟಿದ್ದಾರೆ. ಅದು ನಕಲಿಯಾಗಿದ್ದು, ಆಡಿಯೋದಲ್ಲಿರುವ ಧ್ವನಿಯನ್ನು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಸವಾಲು ಎಸೆದಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಮಾಜಿ ಸಿಎಂ ಬಿಎಸ್‍ವೈ ಅವರ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಇತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ, ವಾಯ್ಸ್ ರೆಕಾರ್ಡ್ ಮಾಡಬಹುದು. ಯಾಕೆಂದರೆ ಅದರಲ್ಲಿ ಎಕ್ಸ್ ಪರ್ಟ್ ಮತ್ತು ನೈಪುಣ್ಯತೆಯನ್ನು ಹೊಂದಿದ್ದಾರೆ. ನಮ್ಮ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಜೊತೆ ನೀವೇ ಮಾತನಾಡಿ ಮಂತ್ರಿ ಸ್ಥಾನ ಕೊಡುತ್ತೇನೆ ಎಂದಿದ್ದು ನಿಜ ತಾನೇ? ಇದಕ್ಕೆ ದಾಖಲೆ ಬೇಕೇ? ಸುಭಾಷ್ ಗುತ್ತೇದಾರ್ ನೇರವಾಗಿ ಹೇಳಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮುಂಬೈನಲ್ಲಿ ಬೇರೆ ಕಡೆ ಇದ್ದರೆ, ಅದಕ್ಕೆ ನಮ್ಮ ಸಂಬಂಧ ಏನು? ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ನೀವು ಮಾಡಬೇಕು. ಅದು ನಮ್ಮ ಕೆಲಸವಲ್ಲ. ಬಿಜೆಪಿ ಶಾಸಕರೇ ನಮ್ಮ ಸರ್ಕಾರವನ್ನು ಉಳಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇದಕ್ಕೆ ಅರ್ಥವೇನು, ಸಿಎಂ ಉತ್ತರ ಕೊಡಲಿ ಎಂದರು.
Advertisement
ಬಿಜೆಪಿ ನಾಲ್ವರು ಸಚಿವರು ನಮ್ಮ ಜೊತೆ ಇದ್ದಾರೆ ಎಂದು ಸಾ.ರಾ.ಮಹೇಶ್, ಪುಟ್ಟರಾಜು ಹೇಳುತ್ತಾರೆ, ಅದಕ್ಕೆ ಉತ್ತರ ಕೊಡಲಿ. ಜೆಡಿಎಸ್ ಎಂಎಲ್‍ಎ ನಾಗನಗೌಡ ಅವರ ಮಗ ಶರಣಗೌಡ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಕಥೆಯನ್ನು ಕಟ್ಟಿದ್ದಾರೆ. ಇದು ಸತ್ಯಕ್ಕೆ ದೂರವಾಗಿರುವುದು. ತರಾತುರಿಯಲ್ಲಿ ನಾನು ಗುರುವಾರ ದೇವಸ್ಥಾನಕ್ಕೆ ಹೋಗಿ, ಬೇರೆ ಕೆಲಸ ಮುಗಿಸಿಕೊಂಡು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ವಾಪಸ್ ಬಂದಿದ್ದೇನೆ ಎಂದು ಬಿಎಸ್‍ವೈ ಕೋಪದಿಂದ ಹೇಳಿದ್ದಾರೆ.
Advertisement
ಈ ಕಥೆಯನ್ನು ಕಟ್ಟಿ, ಗೊಂದಲ ಉಂಟು ಮಾಡುವುದು ಕುಮಾರಸ್ವಾಮಿ ಅವರ ಉದ್ದೇಶವಾಗಿದೆ. ಇವತ್ತು ನೀವು ಪ್ರಾಮಾಣಿಕವಾಗಿ ಇದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. 21 ಶಾಸಕರು ಕುಮಾರಸ್ವಾಮಿ ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೆಸಾರ್ಟಿ ನಲ್ಲಿ ಶಾಸಕರನ್ನು ಇಟ್ಟುಕೊಂಡು ಹೊಡೆದಾಡಿಕೊಳ್ಳುವ ಕೆಲಸ ಮಾಡಿದ್ದೀರಿ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದರೂ ಅಭಿವೃದ್ಧಿಯಾಗಿಲ್ಲ, ಸಾಲಮನ್ನಾ ಮಾಡುತ್ತೇನೆ ಎಂಬ ಆಸೆ ತೋರಿಸಿ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದೀರಿ ಎಂದು ಸಿಎಂ ಮೇಲೆ ಕಿಡಿಕಾರಿದರು.
24 ಲಕ್ಷ ರೈತರ ಸಾಲಮನ್ನಾ ಮಾಡುತ್ತೇನೆಂದು ಹೇಳಿ, ರಾಜ್ಯಪಾಲರ ಭಾಷಣದಲ್ಲಿ 3.28 ಲಕ್ಷ ರೈತರ ಸಾಲಮನ್ನಾಕ್ಕಾಗಿ 1,611 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಹೇಳುತ್ತೀರಿ. ರಾಜ್ಯದಲ್ಲಿ ನೀರಾವರಿ ಯೋಜನೆ ಸ್ಥಗಿತವಾಗಿದೆ. 53 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿ ಒಂದು ನಯಪೈಸೆ ಬಿಡುಗಡೆ ಮಾಡಿಲ್ಲ. ಬರಗಾಲಕ್ಕೆ ಸ್ಪಂಧಿಸಿಲ್ಲ, ಹಣವೂ ಬಿಡುಗಡೆ ಮಾಡಿಲ್ಲ. ಈ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ, ಕಾನೂನಿನ ಮೇಲೆ ಗೌರವ ಇದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಮಾತ್ರ ಉಳಿದಿದೆ. ಒಂದು ಮಾತನ್ನ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿ, ಇವತ್ತಿನ ಬಜೆಟ್ ಅಧಿವೇಶನದಲ್ಲಿ ಮತ್ತು ಚರ್ಚೆಯಲ್ಲಿ ಭಾಗವಹಿಸುತ್ತೇನೆ. ನಾನು ಯಾರನ್ನು ಭೇಟಿ ಮಾಡಿಲ್ಲ. ಅದು ಫೇಕ್ ಆಡಿಯೋ, ತಮ್ಮಲ್ಲಿರುವ ದೊಂಬರಾಟವನ್ನು ಮುಚ್ಚಿಕೊಳ್ಳಲು ಈ ರೀತಿ ನಾಟಕವಾಡಿದ್ದಾರೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv