ತುಮಕೂರು: ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಜೈಲಿನದ್ದೇ ಬಿಎಸ್‍ವೈ ಅವರಿಗೆ ಕನವರಿಕೆ. ಅವರಿಗೆ ಬೇಸಿಕ್ ನಾಲೆಡ್ಜ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪರ ವಿರುದ್ಧ ಎಸಿಬಿ ಎಫ್‍ಐಆರ್ ಹಿಂದೆ ನನ್ನ ಪಾತ್ರ ಇಲ್ಲ. ಸುಮ್ಮನೇ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದವರನ್ನು ಬಿಡಬೇಕಾ ಎಂದು ಸಿಎಂ ಪ್ರಶ್ನಿಸಿದರು.
ಡಿಕೆಶಿ ಮನೆ ಮೇಲೆ ಐಟಿ ರೇಡ್ ಆದ ಮಾತ್ರಕ್ಕೆ ಅವರು ಭ್ರಷ್ಟರಂತಲ್ಲ. ಐಟಿ ಇಲಾಖೆ ಅದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಬಿಜೆಪಿಯವರು ಕಾನೂನು ಗೊತ್ತಿಲ್ಲದ ಮೂರ್ಖರು. ಹಾಗಾಗಿ ಅವರು ಹೋರಾಟ ಮಾಡುತಿದ್ದಾರೆ. ಅಮಿತ್ ಶಾ ಬಂದು ಬಿಜೆಪಿ ಮುಖಂಡರಿಗೆ ಬೈದಿದ್ದಾರೆ. ಅದಕ್ಕಾಗಿ ಕೆಲಸ ಇಲ್ಲದೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇಂದಿರಾ ಕ್ಯಾಂಟಿನ್ ಊಟ ಚೆನ್ನಾಗಿದೆ. ನಾನು ಅಲ್ಲಿ ಊಟ ಮಾಡಿದ್ದೇನೆ. ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ 21 ಕ್ಕೆ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಕೆರೆಗಳ ಡಿನೋಟಿಫೈ ಮಾಡುವ ಪ್ರಸ್ತಾಪ ಇಲ್ಲ. ಯಾವುದೇ ಕೆರೆ ಡಿನೋಟಿಫೈ ಮಾಡಲ್ಲ. ರಾಜ್ಯಪಾಲರು ಮಾಹಿತಿ ಕೊರತೆಯಿಂದ ಹೇಳಿರಬಹುದು ಎಂದು ಹೇಳಿದರು.
ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆ ಆಗಲಿದೆ. ಹೀಗಾಗಿ ದಿನಾಂಕ ಇನ್ನು ನಿಗದಿ ಪಡಿಸಿಲ್ಲ ಎಂದರು.