2024ರ ಕೊನೆ ದಿನ ಇಂದು. ಈ ವರ್ಷದ ಅಸ್ತಮಾನವಾಗಿ 2025ರ ಉದಯಿಸುವ ಸಂದರ್ಭ. ಹಿಂದಿನ ಘಟನಾವಳಿಗಳ ಮೆಲುಕು ಹಾಕುತ್ತಾ ಮುಂದಡಿ ಇಡುವ ಸಮಯ ಬಂದಿದೆ. ಹೊಸ ವರ್ಷ ಸ್ವಾಗತಿಸುವ ಹೊತ್ತಲ್ಲಿ, ತೆರೆಗೆ ಸರಿಯುತ್ತಿರುವ ವರ್ಷದಲ್ಲಿ ಜಗತ್ತಿನಲ್ಲಾದ ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸೋಣ. 2024ರಲ್ಲಿ ಆದ ಪ್ರಮುಖ 10 ಘಟನಾವಳಿಗಳೇನು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ
ಜನವರಿ: ಬರೋಬ್ಬರಿ 500 ವರ್ಷಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿ, ಅಯೋಧ್ಯೆ ರಾಮಮಂದಿರ ಕೊನೆಗೂ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಜ.22 ರಂದು ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯಾಯಿತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ 5 ಅಡಿ ಎತ್ತರದ ಮಂದಸ್ಮಿತ ಬಾಲರಾಮ ಅಯೋಧ್ಯೆ ರಾಮಮಂದಿರದಲ್ಲಿ ಪಟ್ಟಾಭಿಷಿಕ್ತನಾದನು. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವತೀರ್ಥಪ್ರಸನ್ನ ಶ್ರೀಗಳ ಮುಂದಾಳತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ವಿದ್ಯುತ್ ದೀಪಾಲಂಕಾರದಿಂದ ಅಯೋಧ್ಯೆ ಝಗಮಗಿಸಲು ಮಂಗಳೂರಿನವರ ಸೇವೆ ಸ್ಮರಣೀಯ.
Advertisement
Advertisement
ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವಾಲಯ
ಫೆಬ್ರವರಿ: ಮುಸ್ಲಿಂ ರಾಷ್ಟ್ರ ಸಂಯುಕ್ತ ಅರಬ್ ಒಕ್ಕೂಟ (UAE)ದಲ್ಲಿ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಾಯಿತು. ದೇವಾಲಯ ನಿರ್ಮಾಣಕ್ಕೆ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ. BAPS ದೇವಾಲಯದ ನಿರ್ಮಾಣವನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಅಯೋಧ್ಯೆ ರಾಮಮಂದಿರವನ್ನು ಉದ್ಘಾಟಿಸಿದ ಕೆಲವೇ ವಾರಗಳ ನಂತರ, ದುಬೈನ ಅಬುಧಾಬಿಯಲ್ಲಿ ಸ್ಥಾಪಿತವಾದ ಹಿಂದೂ ದೇವಾಲಯವನ್ನು 2024ರ ಫೆಬ್ರವರಿ 14 ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇವಾಲಯವನ್ನು ಉದ್ಘಾಟಿಸಿದರು.
Advertisement
Advertisement
ಬೆಂಗಳೂರು ಕೆಫೆ ಬಾಂಬ್ ಸ್ಫೋಟ
ಮಾರ್ಚ್: ಸಿಲಿಕಾನ್ ಸಿಟಿ ಬೆಂಗಳೂರಿನ ಜನ ಬೆಚ್ಚಿ ಬೀಳುವಂತಹ ಉಗ್ರ ಚಟುವಟಿಕೆಯೊಂದು ರಾಜಧಾನಿಯಲ್ಲಿ ನಡೆಯಿತು. ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಕುಂದಲಹಳ್ಳಿಯ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್ ಸ್ಫೋಟಿಸಲಾಯಿತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಇಸ್ರೇಲ್ ಮೇಲೆ ಇರಾನ್ ದಾಳಿ
ಏಪ್ರಿಲ್: ಇಸ್ರೇಲ್ ಮೇಲೆ ಇರಾನ್ ಸೇನೆಯಿಂದ ಮೊದಲ ಬಾರಿ ನೇರ ದಾಳಿ ನಡೆಯಿತು. 30 ಕ್ಕೂ ಹೆಚ್ಚು ಕ್ಷಿಪಣಿಗಳು, 170 ಡ್ರೋನ್, 120 ಕ್ಕೂ ಹೆಚ್ಚು ಗುರಿ ನಿರ್ದೇಶಿತ ಕ್ಷಿಪಣಿಗಳಿಂದ ದಾಳಿ ನಡೆಸಲಾಯಿತು.
ಪ್ರಜ್ವಲ್ ರೇವಣ್ಣ ಅರೆಸ್ಟ್
ಮೇ: ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹರಣ, ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದಲ್ಲಿ ಜೆಡಿಎಸ್ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಯಿತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ತಂಡವು ಅವರನ್ನು ಬಂಧಿಸಿತ್ತು. ಆರೋಪಿ ಜೈಲಿನಲ್ಲಿದ್ದಾರೆ.
ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ
ಜೂನ್: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತು. ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ದಾಖಲೆ ಬರೆದರು. ಬಿಜೆಪಿ ಸ್ಥಾನ ಗಳಿಕೆ ಕೊಂಚ ಕುಸಿತವಾಗಿ ಎನ್‌ಡಿಎಗೆ 295, ಇಂಡಿಯಾ ಕೂಟಕ್ಕೆ 230 ಸ್ಥಾನ ಸಿಕ್ಕಿತು. 10 ವರ್ಷಗಳ ಬಳಿಕ ಕಾಂಗ್ರೆಸ್ಸಿಗೆ ಅಧಿಕೃತ ಪ್ರತಿಪಕ್ಷ ಸ್ಥಾನ ಸಿಕ್ಕಿತು.
ಸ್ಟಾರ್ ನಟ ದರ್ಶನ್ ಅರೆಸ್ಟ್
ಜುಲೈ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಬಂಧನಕ್ಕೆ ಒಳಗಾದರು. ನಟ ದರ್ಶನ್‌ಗೆ 6 ತಿಂಗಳ ಬಳಿಕ ಜಾಮೀನು ಸಿಕ್ಕಿತು. ಈ ಅವಧಿಯಲ್ಲಿ ಜೈಲಿನಲ್ಲಿ ರಾಜಾತಿಥ್ಯ ವಿವಾದ, ಬೆನ್ನುನೋವಿನಂತಹ ಅನೇಕ ಸಮಸ್ಯೆಗಳನ್ನು ನಟ ಎದುರಿಸಿದರು.
ವಯನಾಡು ಭೂಕುಸಿತ ದುರಂತ: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತವಾಗಿ 200 ಕ್ಕೂ ಅಧಿಕ ಮಂದಿ ಸಾವಿಗೀಡಾದರು. ಮಣ್ಣಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿ ದುರಂತ ಸಂಭವಿಸಿತು.
ಬಾಂಗ್ಲಾದಲ್ಲಿ ಕ್ಷಿಪ್ರಕ್ರಾಂತಿ; ಪ್ರಧಾನಿ ನಿವಾಸದ ಮೇಲೆ ದಾಳಿ
ಆಗಸ್ಟ್: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟ ಜೋರಾಗಿ ಹಿಂಸಾರೂಪ ತಳೆಯಿತು. ದೇಶದ ಜನತೆ ಪ್ರಧಾನಿಗಳ ನಿವಾಸದ ಮೇಲೆ ಮುತ್ತಿಗೆ ಹಾಕಿದರು. ಜನರ ಪ್ರತಿಭಟನೆಯಿಂದ ಬೆಚ್ಚಿದ ಪ್ರಧಾನಿ ಶೇಖ್ ಹಸೀನಾ ಪಲಾಯನ ಮಾಡಿದರು. ಬಾಂಗ್ಲಾ ಬಿಟ್ಟು ಭಾರತದಲ್ಲಿ ಆಶ್ರಯ ಪಡೆದರು. ಹಿಂಸಾಚಾರಕ್ಕೆ ನೂರಾರು ಮಂದಿ ಬಲಿಯಾದರು. ಹಿಂದೂ ನರಮೇಧ ಕೂಡ ನಡೆದು ಸಂಚಲನ ಮೂಡಿಸಿತು.
ತಿರುಪತಿ ಲಡ್ಡು ವಿವಾದ
ಸೆಪ್ಟೆಂಬರ್: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದ ತಯಾರಿಕೆಗೆ ಪ್ರಾಣಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪ ದೇಶಾದ್ಯಂತ ಸಂಚಲನ ಮೂಡಿಸಿತು. ‘ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬನ್ನು ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು’ ಎಂದು ಸಿಎಂ ಚಂದ್ರಬಾಬು ನಾಯ್ಡು ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತು.
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ
ಅಕ್ಟೋಬರ್: ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್ ದಾಳಿ ನಡೆಸಿತು. ಪ್ಯಾಲೆಸ್ತೀನ್, ಲೆಬನಾನ್ ಮೇಲೆ ದಾಳಿ ಇಸ್ರೇಲ್ ದಾಳಿ ಮಾಡಿತು. ಇದರ ಬೆನ್ನಲ್ಲೇ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮಾಡಿತು. ಹೀಗೆ, ಮಧ್ಯಪ್ರಾಚ್ಯ ಸಂಘರ್ಷ ನಡೆಯಿತು.
ಅಮೆರಿಕ ಅಧ್ಯಕ್ಷಗಾದಿಗೆ ಮತ್ತೆ ಟ್ರಂಪ್
ನವೆಂಬರ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯಗಳಿಸಿದರು. ದೊಡ್ಡಣಗೆ ಮತ್ತೆ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿದ್ದ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹೀನಾಯ ಸೋಲನುಭವಿಸಿದರು.
ದಕ್ಷಿಣ ಕೊರಿಯಾ ವಿಮಾನ ದುರಂತ
ಡಿಸೆಂಬರ್: ದಕ್ಷಿಣ ಕೊರಿಯಾದಲ್ಲಿ ವಿಮಾನ ದುರಂತವೊಂದು ಸಂಭವಿಸಿ 179 ಮಂದಿ ದಾರುಣ ಸಾವಿಗೀಡಾದರು. ಮುವಾನ್ ಏರ್‌ಪೋರ್ಟ್‌ನಲ್ಲಿ ರನ್‌ವೇನಿಂದ ಪಕ್ಕಕ್ಕೆ ಜಾರಿದ ವಿಮಾನವು ಕಾಂಕ್ರಿಟ್ ಗೋಡೆಗೆ ಡಿಕ್ಕಿ ಹೊಡೆಯಿತು. ತಕ್ಷಣ ಹೊತ್ತಿಕೊಂಡ ಬೆಂಕಿಯಿಂದ 181 ಪ್ರಯಾಣಿಕರ ಪೈಕಿ, 179 ಮಂದಿ ಜೀವ ಕಳೆದುಕೊಂಡರು. ಇಬ್ಬರು ಮಾತ್ರ ಬದುಕುಳಿದಿದ್ದಾರೆ.