– ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂ ಕ್ಲೋಸ್?
– ಬಹುತೇಕ ಎಟಿಎಂ ಮುಂದೆ ರಾರಾಜಿಸುತ್ತಿದೆ ನೋ ಕ್ಯಾಶ್ ಬೋರ್ಡ್
ಬೆಂಗಳೂರು: ಈಗಾಗಲೇ ನಗರದ ಅನೇಕ ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಬಿದ್ದಿದೆ. ಈಗ ವರ್ಷದ ಕೊನೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನೋಟ್ ಬ್ಯಾನಿನ ನಂತರ ಮತ್ತೆ ಹಣ ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.
ಇತ್ತೀಚೆಗೆ ನಗರದ ಕೆಲ ಎಟಿಎಂಗೆ ಹೋದರೆ ಅಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಿರುತ್ತದೆ. ಈಗ ಸದ್ದಿಲ್ಲದೇ ನಗರದಲ್ಲಿ ಎಟಿಎಂಗಳು ಮಾಯವಾಗುತ್ತಿದ್ದು, ಈಗಾಗಲೇ ನಗರದಲ್ಲಿ ಶೇ.30 ರಿಂದ 40 ರಷ್ಟು ಎಟಿಎಂಗಳು ಕ್ಲೋಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಎಟಿಎಂಗಳೇ ಹೆಚ್ಚು ಅನ್ನೋ ಮಾಹಿತಿಯನ್ನು ಬ್ಯಾಂಕ್ ಯೂನಿಯನ್‍ಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಎಟಿಎಂಗೆ ಹಣ ತುಂಬಲು ಸಮಯ ನಿಗದಿ- ಗೃಹ ಸಚಿವಾಲಯದಿಂದ ಆದೇಶ
Advertisement
Advertisement
ಎಟಿಎಂ ಕ್ಲೋಸ್ ಆಗಿದ್ಯಾಕೆ?
1. ಆರ್ ಬಿಐ ಮಾರ್ಚ್ 2019ಕ್ಕೆ ಎಟಿಎಂಗಳಿಗೆ ಕೆಲವೊಂದು ಸುರಕ್ಷತಾ ಮಾನದಂಡ ಅಳವಡಿಸಲು ಡೆಡ್‍ಲೈನ್ ನೀಡಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಇದನ್ನು ಭರಿಸಲು ಸಾಧ್ಯವಿಲ್ಲ ಅನ್ನೋದು ಎಟಿಎಂ ಉದ್ಯಮ ಒಕ್ಕೂಟ ಹಾಗೂ ಬ್ಯಾಂಕುಗಳ ವಾದವಾಗಿದೆ.
2. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟದ ಪ್ರಮಾಣ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಎಟಿಎಂ ಕ್ಲೋಸ್.
3. ಆರ್ ಬಿಐನಿಂದ ನಗದು ವಿತರಣೆ ಕಡಿಮೆಯಾಗುತ್ತಿದೆ. ಉದ್ದೇಶ ಪೂರ್ವಕವಾಗಿ ದುಡ್ಡು ಸರಬಾರಾಜು ಕಡಿಮೆ ಮಾಡಿದ್ದಾರೆ. ಎಟಿಎಂಗಳಿಗೆ ಕ್ಯಾಶ್ ತುಂಬಿಸಲು ಆಗುತ್ತಿಲ್ಲ ಅನ್ನೋದು ಬ್ಯಾಂಕ್‍ಗಳ ದೂರು.
Advertisement
ಬ್ಯಾಂಕ್‍ಗಳ ವಾದ ಇದಾಗಿದ್ದರೆ ಜನ ಬೇಸತ್ತು ಹೋಗಿದ್ದಾರೆ. ಬಹುತೇಕ ಎಟಿಎಂಗಳು ಕ್ಲೋಸ್ ಆಗಿರುವುದರಿಂದ ತೊಂದರೆಯಾಗುತ್ತಿದೆ. ಬ್ಯಾಂಕ್‍ಗಳಲ್ಲಿ ಕ್ಯೂ ಇರುವುದರಿಂದ ಕ್ಯಾಶ್ ತೆಗೆದುಕೊಳ್ಳೋಕೆ ಸಾಧ್ಯವಾಗುವುದಿಲ್ಲ ಎಂದು ಗ್ರಾಹಕ ನವೀನ್ ದೂರಿದ್ದಾರೆ.
Advertisement
ಏಕೆ ಎಟಿಎಂ ಮುಚ್ಚಲಾಗುತ್ತಿದೆ?:
ಎಟಿಎಂಗಳ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್, ಹಣ ಸಾಗಾಣಿಕೆ ವಾಹನ, ಎಟಿಎಂನ ಕೆಸೆಟ್ ಸಾಕೆಟ್ ಅಭಿವೃದ್ಧಿ (ಹೊಸ ನೋಟುಗಳನ್ನು ಇಡಲು ಆಗುವಂತೆ ಟ್ರೇಗಳನ್ನು ಮರುಹೊಂದಾಣಿಕೆಗೆ) ಭಾರೀ ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಎಟಿಎಂಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಹೊರೆ ಆಗಲಿದೆ. ಕೇವಲ ಕೆಸೆಟ್ ಅಭಿವೃದ್ಧಿಗೆ ಒಟ್ಟು 3.5 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದು ಎಟಿಎಂ ಉದ್ಯಮ ಒಕ್ಕೂಟ(ಸಿಎಟಿಎಂಐ) ನಿರ್ದೇಶಕ ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದರು.
ಗೃಹ ಸಚಿವಾಲಯ ಇತ್ತೀಚೆಗೆ ಸೂಚನೆ ನೀಡಿದಂತೆ ಜಿಪಿಎಸ್, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ 300 ವಾಹನಗಳ ಖರೀದಿಗೆ 100 ಕೋಟಿ ರೂ. ಅಗತ್ಯವಾಗುತ್ತದೆ. ಅದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಚಾಲಕ ಪ್ರಯಾಣಿಸಬಲ್ಲರು. ಜೊತೆಗೆ ಸಾಫ್ಟ್ ವೇರ್ ಅನ್ನು ವಿಂಡೋಸ್ ಎಕ್ಸ್ ಪಿ ಯಿಂದ ವಿಂಡೋಸ್-10 ಗೆ ಅಭಿವೃದ್ಧಿಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಸಾಫ್ಟ್ ವೇರ್, ಹಾರ್ಡ್ ವೇರ್ ಬದಲಾವಣೆ, ನಿರ್ವಹಣೆಗೆ ಒಂದು ಎಟಿಎಂಗೆ ಪ್ರತಿ ತಿಂಗಳಿಗೆ 1.50 ಲಕ್ಷ ರೂ. ವೆಚ್ಚವಾಗುತ್ತದೆ. ಇದೇ ರೀತಿ ದೇಶದ 2.38 ಲಕ್ಷ ಎಟಿಎಂಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಟಿಎಂ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ದೇಶದಲ್ಲಿರುವ ಎಟಿಎಂಗಳಲ್ಲಿ ಶೇ.10ರಷ್ಟು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ದೇಶದ ಜನಸಂಖ್ಯೆ ಪ್ರಕಾರ ಒಂದು ಲಕ್ಷ ಎಟಿಎಂಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಸಾಕಾಗುತ್ತದೆ ಎನ್ನಲಾಗುತ್ತದೆ. 2.38 ಲಕ್ಷ ಎಟಿಎಂಗಳಲ್ಲಿ ಶೇ. 80ರಷ್ಟು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಎಟಿಎಂಗಳು ಮುಚ್ಚಲಿವೆ. ಇದರಿಂದ ಸರ್ಕಾರದ ಆರ್ಥಿಕ ಸೇರ್ಪಡೆ ಪ್ರಯತ್ನದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ. ಫಲಾನುಭವಿಗಳಿಗೆ ಸರ್ಕಾರದ ಸಬ್ಸಿಡಿ ಹಣ ಪಡೆಯುವುದು ಕಷ್ಟವಾಗಲಿದೆ ಎಂದು ವಿ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv