– ಪ್ರಹ್ಲಾದ್ ಜೋಶಿಯನ್ನ ಸೋಲಿಸಲು ಬಿಎಸ್‌ವೈ ಚೇಲಾಗಳನ್ನ ರೆಡಿ ಮಾಡಿದ್ದಾರೆ; ಹೊಸ ಬಾಂಬ್
ಹುಬ್ಬಳ್ಳಿ: ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಆರೋಪಿಸಿದರು.
ಹುಬ್ಬಳ್ಳಿಯ(Hubballi) ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ. ಎಲ್ಲಾ ಸಮುದಾಯದ ಯುವಕರು ರಸ್ತೆಗೆ ಬಂದು ನನ್ನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಹಿಂದುತ್ವದ ಪರವಾಗಿ ಮಾತನಾಡುತ್ತಿರುವವನ್ನು ತುಳಿಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ. ನನ್ನ ಪರವಾಗಿ ಮಾತನಾಡಿ, ಹೋರಾಟ ಮಾಡಿ ಎಂದು ನಾನು ಯಾರಿಗೂ ಹೇಳಿಲ್ಲ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಈ ಹಿಂದೆ ಯಡಿಯೂರಪ್ಪನವರನ್ನ(B S Yediyurappa) ಮತ್ತು ಸಿದ್ದರಾಮಯ್ಯನವರನ್ನ(Siddaramaiah) ಹೊರಗಡೆ ಹಾಕಿದಾಗ ಇಷ್ಟು ದೊಡ್ಡಮಟ್ಟದ ಹೋರಾಟ ಮಾಡಿಲ್ಲ. ಇಂದು ಸ್ವಯಂಪ್ರೇರಿತವಾಗಿ ಜನರು ಹೋರಾಟ ಮಾಡುತ್ತಿದ್ದಾರೆ. ನಾವು ಯಾರಿಗೂ ದುಡ್ಡು ಕೊಟ್ಟು ಹೋರಾಟ ಮಾಡಲು ಹೇಳಿಲ್ಲ. ಹಿಂದೂ ಯುವಕರ ಕೊಲೆಯಾದ ಸಮಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇನೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು.
ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ
ಮೀಸಲಾತಿಗಾಗಿ ಪಾದಯಾತ್ರೆ ಆರಂಭ ಮಾಡಿದಾಗ ನಾನೇ ಅದಕ್ಕೆ ಚಾಲನೆ ನೀಡಿದ್ದೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಮಹಾನಾಯಕ ನಮ್ಮ ಸ್ವಾಮೀಜಿಗಳಿಗೆ ಹೋರಾಟ ಕೈ ಬಿಡಲು ಆಮಿಷ ತೋರಿಸಿದ್ದರು. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಪರೋಕ್ಷವಾಗಿ ಪಂಚಮಸಾಲಿ ಮುಖಂಡರಾದ ಮೋಹನ್ ಲಿಂಬಿಕಾಯಿ, ನೀಲಕಂಠ ಶೆಟ್ಟಿ, ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹರಿಹಾಯ್ದ ಅವರು, ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು
ಪಂಚಮಸಾಲಿ ಹೋರಾಟದ ಸಮಯದಲ್ಲಿ ಸುವರ್ಣಸೌಧದ ಮುಂದೆ ಲಾಠಿ ಚಾರ್ಜ್ ಮಾಡಲಾಗಿದೆ. ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ. ಆದರೆ ರೈತಾಪಿ ವರ್ಗ ಅತೀ ಹೆಚ್ಚು ಇರುವ ಪಂಚಮಸಾಲಿ ಸಮುದಾಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು
ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದ ಹೋರಾಟದ ಸಮಯದಲ್ಲಿ ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಚಾರ್ಜ್ ಗೈಡ್‌ಲೈನ್ಸ್ ಬಿಟ್ಟು, ಮಾನವ ಹಕ್ಕು ಉಲ್ಲಂಘನೆ ಮಾಡಿ ಪಂಚಮಸಾಲಿ ಸಮುದಾಯದ ಮೇಲೆ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷಯಿದೆ. ಅಮಾನುಷವಾಗಿ ಈ ಲಾಠಿ ಚಾರ್ಜ್ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಸ್ವಾಗತ ಮಾಡುತ್ತೇನೆ. ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು ಎಂದರು. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?
ವಿಜಯೇಂದ್ರನ ಹಗರಣಕ್ಕೆ ಯಡಿಯೂಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ರು
ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗೆ ಇಳಿಸಿದ್ದು ಏಕೆಂದರೆ ಅವರು ಮಾಡಿದ ಭ್ರಷ್ಟಾಚಾರ, ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದೆ ರಾಜೀನಾಮೆಗೆ ಕಾರಣ. ಅವರ ಸುಪುತ್ರ ವಿಜಯೇಂದ್ರ(B Y Vijayendra) ಮಾಡಿದ ಹಗರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನನ್ನನ್ನ ನೀವು ಹೊರಗಡೆ ಹಾಕಿರಬಹುದು. ರಾಜ್ಯದಲ್ಲಿ ಇವತ್ತು ಹಿಂದುತ್ವದ ನಾಯಕ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್ ಲೇವಡಿ
ಎಲ್ಲಾ ಸಮಾಜ ನ್ಯಾಯಕ್ಕಾಗಿ ಸದನದಲ್ಲಿ ಹೋರಾಟ ಮಾಡಿದವನು ನಾನು. ಕೂಡಲಸಂಗಮ ಸ್ವಾಮೀಜಿಗಳು ಬಹಳಷ್ಟು ನಿಸ್ವಾರ್ಥರಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟವನ್ನ ನಮ್ಮ ಸ್ವಾಮೀಜಿಗಳು ಮುಂದುವರೆಸುತ್ತಾರೆ. ಸಮಾಜದ ಹೋರಾಟದಿಂದ ಮಂತ್ರಿ ಸ್ಥಾನವನ್ನ ತಪ್ಪಿಸಿಕೊಂಡವನು ನಾನು ಎಂಬುದು ಎಲ್ಲರಿಗೂ ಗೊತ್ತು. ಪ್ರಬಣ್ಣ ಹುಣಸಿಕಟ್ಟಿ ಶನಿವಾರ ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿ(Prahlad Joshi) ಮತ್ತು ಅರವಿಂದ್ ಬೆಲ್ಲದ್ ಅವರನ್ನ ಸೋಲಿಸಲು ಇಲ್ಲೊಬ್ಬ ನ್ಯಾಯವಾದಿಯನ್ನ ಯಡಿಯೂರಪ್ಪ ರೆಡಿ ಮಾಡಿದ್ದಾರೆ. ಪ್ರತಿಯೊಬ್ಬರನ್ನ ಸೋಲಿಸಲು ಒಬ್ಬೊಬ್ಬ ಚೇಲಾಗಳನ್ನ ಯಡಿಯೂರಪ್ಪ ಸಿದ್ಧ ಮಾಡಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.