ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರದಲ್ಲಿ ಎಡವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನಿಲ್ಲದ ನೋವು ಕಾಡುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.
ಯಾಕಂದರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು 2018 ರ ವಿಧಾನಸಭಾ ಚುನಾವಣೆ ಎದುರಿಸಿದ ಸಿದ್ದರಾಮಯ್ಯರಿಗೆ ಹಿನ್ನಡೆಯ ಸೂಚನೆಯನ್ನು ಪುತ್ರ ಯತೀಂದ್ರ ಮೊದಲೇ ಕೊಟ್ಟಿದ್ದರು. ಈ ಎರಡು ತಪ್ಪು ನೀವು ಮಾಡುತ್ತಿದ್ದೀರಾ ಅದು ಸರಿ ಅಲ್ಲ ಎಂದಿದ್ದರು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದ ಮುಖಂಡರ ಬಳಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಈಗ ವರುಣ ಕ್ಷೇತ್ರದ ಶಾಸಕ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಗೊತ್ತಿಲ್ಲದವರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಡಾ.ಯಂತೀಂದ್ರ ಅವರೇ ಸಿದ್ದರಾಮಯ್ಯ ಅವರನ್ನು ಮೊದಲು ಎಚ್ಚರಿಸಿದ್ದರು ಎನ್ನಲಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಷಯಕ್ಕೆ ಕೈ ಹಾಕಬೇಡಿ ಅದು ನಿಮ್ಮ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು. ಸುಮ್ಮನಿದ್ದು ಬಿಡಿ ಎಂದು ಪುತ್ರ ಹೇಳಿದ್ದರಂತೆ. ಆಗ ಸಿದ್ದರಾಮಯ್ಯ ಅವರು ರಾಜಕೀಯ ಅನುಭವ ಇಲ್ಲದ ಯತೀಂದ್ರ ಏನೋ ಹೇಳುತ್ತಾನೆ. ನಿನಗೆ ಅದೆಲ್ಲ ಗೊತ್ತಾಗಲ್ಲ ಸುಮ್ಮನಿರು ಎಂದು ಪುತ್ರನಿಗೆ ಹೇಳಿದ್ದರು. ಇನ್ನು ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡುವುದಕ್ಕೂ ಯತೀಂದ್ರ ವಿರೋಧ ವ್ಯಕ್ತಪಡಿಸಿದ್ದರು. ಆಗಲೂ ಅದಕ್ಕೆ ಸಮಜಾಯಿಷಿ ನೀಡಿದ್ದ ಸಿದ್ದರಾಮಯ್ಯ, ರಾಜಕಾರಣದಲ್ಲಿ ಅದೆಲ್ಲಾ ಮಾಡಬೇಕಾಗುತ್ತೆ ನಿನಗೆ ಗೊತ್ತಾಗಲ್ಲ ಎಂದಿದ್ದರೆಂದು ತಿಳಿದು ಬಂದಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯತೀಂದ್ರ, ರಾಜ್ಯದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಎರಡು ಪ್ರಬಲ ಸಮುದಾಯದವರು ಅವರನ್ನ ಎದುರು ಹಾಕಿಕೊಂಡು ಅಧಿಕಾರ ಹಿಡಿಯುವುದು ಕಷ್ಟ. ಅಲ್ಲದೆ ಮೈಸೂರಿನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಇರುವುದು ತಮ್ಮ ಗೆಲುವಿಗೂ ತೊಂದರೆ ಆಗಬಹುದು. ಆದ್ದರಿಂದ ಆ ಎರಡು ವಿಷಯಗಳಲ್ಲಿ ಜಾಗೃತೆಯ ಹೆಜ್ಜೆ ಇಡಿ ಎಂದು ಸಿದ್ದರಾಮಯ್ಯಗೆ ಯತೀಂದ್ರ ಹೇಳಿದ್ದರು ಎನ್ನಲಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಾಗೂ ಒಕ್ಕಲಿಗರ ಸಿದ್ದರಾಮಯ್ಯ ಬಗೆಗಿನ ಕೋಪ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುವಂತೆ ಮಾಡಿತ್ತು. ರಾಜ್ಯದಲ್ಲಿ ಇದೇ ಕಾರಣಕ್ಕೆ ಕಾಂಗ್ರೆಸ್ ಗೆ ಹಿನ್ನಡೆ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಆಗುವಂತಾಯ್ತು. ತಂದೆಗೆ ಬುದ್ಧಿ ಹೇಳಿದ್ದ ಡಾ.ಯತೀಂದ್ರ ರಾಜಕೀಯ ಅನುಭವದ ಕೊರತೆ ನಡುವೆಯೂ ವರುಣ ಕ್ಷೇತ್ರದಲ್ಲಿ ಮೊದಲ ಯತ್ನದಲ್ಲೇ ಗೆದ್ದು ಶಾಸಕರಾಗಿದ್ದಾರೆ. ಈ ಎಲ್ಲಾ ಘಟನೆಗಳನ್ನ ತಮ್ಮ ಆಪ್ತರ ಬಳಿ ಇತ್ತೀಚೆಗೆ ಸಾಕಷ್ಟು ಬಾರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.