ಬೆಂಗಳೂರು: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿಗೆ ಖಾತೆ ಮಾಡಿಕೊಡುವ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ. ಖಾತೆ ಮಾಡಿಕೊಡಲು ಲಂಚ ಪಡೆಯುವ ಕೆಲಸ ಆಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಆಗ್ರಹಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಯತೀಂದ್ರ ಸಿದ್ದರಾಮಯ್ಯ, ಮೈಸೂರಿನಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಮಾಡಿಕೊಡುತ್ತಿಲ್ಲ. ಅರ್ಜಿ ಹಾಕಿ, ಹಣ ಕಟ್ಟಿದ ಮೇಲೆಯೂ ಖಾತೆ ಮಾಡಿಕೊಡುತ್ತಿಲ್ಲ. ಮೈಸೂರಿನಲ್ಲಿ ಈ ವಿಚಾರವಾಗಿ ಅಕ್ರಮಗಳು ನಡೆಯುತ್ತಿವೆ. ಖಾತೆ ಮಾಡಿಸಲು ಲಂಚ ಕೇಳುವ ಪರಿಸ್ಥಿತಿ ಬಂದಿದೆ. 30-35 ವರ್ಷಗಳಿಂದ ಖಾತೆ ಆಗಿಲ್ಲ. ಸಾಗುವಳಿ ಚೀಟಿ ಕೊಟ್ಟವರಿಗೆ ಕೂಡಲೇ ಖಾತೆ ಮಾಡಿಕೊಡಬೇಕು. ಖಾತೆ ಮಾಡಿ ಕೊಡುವುದಕ್ಕೆ ಒಂದು ಕಾಲ ಮಿತಿಯನ್ನು ಸರ್ಕಾರ ಮಾಡಬೇಕು ಎಂದರು.ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ
ಇದಕ್ಕೆ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿ, ಸಾಗುವಳಿ ಚೀಟಿ ಕೊಟ್ಟವರಿಗೆ ಇನ್ನೂ ಖಾತೆ ಆಗಿಲ್ಲ ಅನ್ನೋದು ಸತ್ಯ. 20-30 ವರ್ಷಗಳಿಂದ ಸಾಗುವಳಿ ಚೀಟಿ ಇದ್ದರೂ ಖಾತೆ ಮಾಡಿಕೊಡಲು ಆಗಿಲ್ಲ. ನೈಜವಾಗಿ ಇರುವ ಕೇಸಲ್ಲಿ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ. ಅಧಿಕಾರಿಗಳಿಗೂ ಖಾತೆ ಮಾಡಲು ಸೂಚನೆ ಕೊಟ್ಟಿದ್ದೇನೆ. ಅನೇಕ ಕೇಸ್‌ಗಳಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆ. ಅರಣ್ಯ ಭಾಗದಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲಾತಿ ಮಾಡಿಕೊಡಲು ಆಗುವುದಿಲ್ಲ. ಅದನ್ನು ಪರಿಶೀಲನೆ ಮಾಡಬೇಕು. ನೈಜವಾಗಿ ಹಂಚಿಕೆ ಆಗಿರುವವರಿಗೆ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಮೈಸೂರಿನಲ್ಲಿ ಲಂಚ ಪಡೆಯುತ್ತಿದ್ದಾರೆ ಎಂಬ ಯತೀಂದ್ರ ಮಾತಿಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿಎಂ ಪುತ್ರರೇ ಸಾಗುವಳಿ ಚೀಟಿಗೆ ಖಾತೆ ಪಡೆಯಲು ಲಂಚ ಕೊಡಬೇಕು ಎಂದು ಹೇಳಿದ್ದಾರೆ. ಯಾರಿಗೆ ಲಂಚ ಕೊಡಬೇಕು ಅದನ್ನು ಸಚಿವರು ಹೇಳಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಮ್ಮ ಮಾತಿಗೆ ವಿವರಣೆ ಕೊಟ್ಟ ಯತೀಂದ್ರ, ಲಂಚ ಎನ್ನುವುದು ಎಲ್ಲಾ ಕಡೆಯಲ್ಲೂ ಇದೆ. ಬಗರ್ ಹುಕುಂ ಸಮಿತಿಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅಧಿಕಾರಿಗಳಿಗೆ ಹೇಳಿದರೂ ಅವರು ಮಾಡಿಕೊಡುವುದಿಲ್ಲ. ಇದು ಸರ್ಕಾರದ ಹಂತದಲ್ಲಿ ಅಲ್ಲ. ಸ್ಥಳೀಯವಾಗಿ ವಿಳಂಬವಾಗಿದೆ ಎಂದು ಛಲವಾದಿಗೆ ತಿರುಗೇಟು ಕೊಟ್ಟರು.
ಬಳಿಕ ಮಾತಾನಾಡಿದ ಸಚಿವ ಕೃಷ್ಣಭೈರೇಗೌಡ, ಎಲ್ಲಾ ವಿಷಯಗಳಲ್ಲಿ ರಾಜಕೀಯ ಮಾಡುವುದು ಬೇಡ. ಬಿಜೆಪಿ 4 ವರ್ಷಗಳ ಕಾಲ ಅಧಿಕಾರ ಮಾಡಿತ್ತು. ಯಾಕೆ ಆಗ ಖಾತೆ ಮಾಡಿಕೊಡಲಿಲ್ಲ? ಇದರಲ್ಲಿ ರಾಜಕೀಯ ಬೇಡ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: 2024ರಲ್ಲಿ 50 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳ ವಜಾ – ರಿಯಲ್ ಎಸ್ಟೇಟ್‌ಗೆ ಹೊಡೆತ