ಮಡಿಕೇರಿ: ಇತ್ತೀಚೆಗಷ್ಟೇ ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಮ್ಮ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್ ಶಾ ಅವರನ್ನ ರೌಡಿ ಎಂದು ನಾನೇ ಹುಟ್ಟಿಸಿಕೊಂಡು ಹೇಳಿದಂತಹ ಮಾತಲ್ಲ, ಈ ಹಿಂದೆ ಸಿಬಿಐ ಕೂಡ ಹೇಳಿತ್ತು. ಅಮಿತ್ ಶಾ ಅವರಿಗೆ ಕ್ರಿಮಿನಲ್ ಬ್ಯಾಗ್ರೌಂಡ್ ಇದೆ ಅಂತ ಹೇಳಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್ ಕೋರ್ಟ್‌ಗೆ ಸಿಬಿಐ ಕೊಟ್ಟ ಹೇಳಿಕೆ ಅದು. ಅದೇ ಹೇಳಿಕೆಯನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೇ, ಮೊದಲು ಸಿಬಿಐ ಮೇಲೆ ಅವರು ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಅದಕ್ಕೆ ನಾನು ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಓರ್ವ ಗೂಂಡಾ, ರೌಡಿ ಗುಜರಾತ್‍ನಲ್ಲಿ ನರಮೇಧ ಮಾಡಿದ್ರು: ಯತೀಂದ್ರ ಸಿದ್ದರಾಮಯ್ಯ
Advertisement
Advertisement
ಮೋದಿ ವಿರುದ್ಧವೂ ಯತೀಂದ್ರ ಕಿಡಿ:
ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ದೇಶವನ್ನು ಎಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟು ಹಾಳುಮಾಡಿದ್ದಾರೆ. ಮೋದಿ ಸರ್ಕಾರದ ಬಂದ ಮೇಲೆ ನಮ್ಮ ದೇಶ 25 ವರ್ಷ ಹಿಂದಕ್ಕೆ ಹೋಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಜನರಿಗೆ ಏನು ಭರವಸೆ ನೀಡಿತ್ತೋ ಅದನ್ನು ನೆರವೇರಿಸಿಲ್ಲ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್; ಅಧಿಕೃತ ಘೋಷಣೆ
ಮೋದಿ ಅವರು ಶ್ರೀಮಂತರ ಕಪ್ಪು ಹಣ ತರುತ್ತೀನಿ ಎಲ್ಲರ ಬ್ಯಾಂಕ್ ಖಾತೆಗೆ ಹಣ ಹಾಕ್ತೀನಿ ಅಂತಾ ಹೇಳಿದ್ದರು. ಸುಪ್ರೀಂ ಕೋರ್ಟ್ ಕಪ್ಪು ಹಣ ಇಟ್ಟವರ ಪಟ್ಟಿ ಕೇಳಿದಾಗ, ಆ ಪಟ್ಟಿಯೇ ಇಲ್ಲ ಅಂತ ಹೇಳಿದರು. ರೈತರ ಬದುಕು ಹಸನಾಗಿ ಮಾಡ್ತೀನಿ ಅಂದ್ರು, ಅದು ಇಂದಿಗೂ ಮಾಡಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಂದೋಲನ ನಡೆಸಿದ್ರು. ಆದ್ರೆ ಇವತ್ತು ಭ್ರಷ್ಟಾಚಾರ ಬಿಜೆಪಿಯಲ್ಲಿ ಮಿತಿಮೀರಿ ಹೋಗಿದೆ. ಚುನಾವಣಾ ಬಾಂಡ್ ವಿಚಾರದಲ್ಲಿ 12,000 ಕೋಟಿ ರೂ.ನಲ್ಲಿ 6 ಸಾವಿರ ಕೋಟಿ ಹಣ ಹೋಗಿರುವುದು ಬಿಜೆಪಿ ಪಕ್ಷಕ್ಕೆ. ನ್ಯಾಯಾಲಯಗಳನ್ನೂ ತಪ್ಪ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಬಾರಿ 400ಕ್ಕೂ ಹೆಚ್ಚು ಸೀಟ್‌ಗಳನ್ನ ಗೆದ್ದು ಬರುತ್ತೇವೆ ಎಂದಿದ್ದಾರೆ. 400ಕ್ಕೂ ಹೆಚ್ಚು ಸೀಟ್ ಗೆಲುವು ಯಾಕೆ ಬೇಕು ಅಂತ ಅವರ ಪಕ್ಷದ ಅನಂತ್ ಕುಮಾರ್ ಹೆಗ್ಡೆ ಅವರೇ ಸತ್ಯ ಬಿಚ್ಚಿಟ್ಟಿದ್ದಾರೆ. ಆದ್ದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರ ಆಡಳಿತಕ್ಕೆ ಬರುತ್ತದೆ. ಸಮಾನತೆ ಹೋಗಿ ಅಸಮಾನತೆ ಸೃಷ್ಟಿಯಾಗುತ್ತದೆ ಎಂದು ಆತಂಕಪಟ್ಟಿದ್ದಾರೆ. ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ