Bengaluru CityCinemaDistrictsKarnatakaLatestSandalwood

ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಯಶೋಮಾರ್ಗ

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿ ಮೂಲಭೂತ ವಸ್ತುಗಳ ಅಗತ್ಯತೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು “ಯಶೋಮಾರ್ಗ” ತಂಡದ ಮೂಲಕ ದಿನಬಳಕೆ ವಸ್ತುಗಳನ್ನು ಕಳುಹಿಸಿದ್ದಾರೆ.

ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಯಶೋಮಾರ್ಗದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. ಲಾರಿಯಲ್ಲಿ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಬ್ಯಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ತಂಡ ಕಳುಹಿಸಿದೆ. ಈ ಮೂಲಕ ಯಶ್ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಇತ್ತ ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ, “ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ನಿದೇರ್ಶಕ ಪವನ್ ಒಡೆಯರ್ ಹಾಗೂ ರೇಮೊ ಚಿತ್ರ ತಂಡ ಕೂಡ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಜನರಿಗೆ ಬೇಕಾಗುವ ಆಹಾರ, ಬಟ್ಟೆಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿದ್ದಾರೆ. ಅಲ್ಲದೆ, “ಉತ್ತರ ಕರ್ನಾಟಕದ ಪ್ರವಾಹದ ದೃಶ್ಯಾವಳಿಗಳು ಕಂಡು ಬೇಜಾರು ಹಾಗೂ ಭಯವಾಯಿತು. ನಿಮ್ಮ ಜೊತೆ ನಾವಿದ್ದೀವಿ ನಿಮ್ಮ ಸಹಾಯಕ್ಕೆ ನಾವೆಲ್ಲರೂ ಕೈ ಜೋಡಿಸ್ತೀವಿ. ನಮ್ಮ ಚಿತ್ರರಂಗದ ಎಲ್ಲ ಕಲಾವಿದರ ಹಾಗೂ ಅಭಿಮಾನಿಗಳು ಜೊತೆಗೂಡಿ ನಿಮಗೆ ಬೇಕಾದ ಅಗತ್ಯತೆಗಳನ್ನು ಕಳುಹಿಸುವ ಪ್ರಯತ್ನ ಮಾಡುತ್ತಿದ್ದೇವೆ. ದಯವಿಟ್ಟು ಕುಗ್ಗಬೇಡಿ ಧೈರ್ಯದಿಂದಿರಿ” ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನಟ ಕಬೀರ್ ಸಿಂಗ್ ಅವರು ತಮ್ಮ ಟ್ವಿಟ್ಟರಿನಲ್ಲಿ, ”ಪ್ರವಾಹದಿಂದ ಸಿಲುಕಿರುವ ಉತ್ತರ ಕರ್ನಾಟಕ ಜನರಿಗೆ ದಯವಿಟ್ಟು ಸಹಾಯ ಮಾಡಿ. ಯಾವುದೇ ರೀತಿಯಲ್ಲಿ ಬೇಕಾದರೂ ಸಹಾಯ ಮಾಡಿ” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕಬೀರ್ ಅವರ ಟ್ವೀಟ್‍ಗೆ ಅಭಿಮಾನಿಗಳು ನಾವು ಅವರ ಜೊತೆ ಇದ್ದೇವೆ ಎಂದು ರೀ-ಟ್ವೀಟ್ ಮಾಡುವ ಮೂಲಕ ಸ್ಪಂದಿಸಿದ್ದಾರೆ.

ಸ್ಯಾಂಡಲ್‍ವುಡ್ ಕಲಾವಿದರಾದ ದರ್ಶನ್, ಸುದೀಪ್, ಜಗ್ಗೇಶ್, ಶ್ರೀಮುರಳಿ, ಚಂದನ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಉತ್ತರ ಕರ್ನಾಟಕಕ್ಕೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button